2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶದ ಬಳಿಕವೂ ಕೇವಲ 100 ಗ್ರಾಂ ಹೆಚ್ಚುವರಿ ತೂಕದಿಂದಾಗಿ ಪದಕ ಕಳೆದುಕೊಂಡ ವಿನೇಶ್ ಫೋಗಟ್ ಪಡೆದ ಬಹುಮಾನದ ಮೊತ್ತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ. ವಿನೇಶ್ ಈವರೆಗೆ 16 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ವಿನೇಶ್ ಫೋಗಟ್ ಪತಿ ಸೋಮವೀರ್ ರಾಠಿ ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲದಿದ್ದರೂ ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಭಾರತದಲ್ಲಿ ಅವರಿಗೆ ಅಪಾರ ಪ್ರೀತಿ, ಆದರ ಸಿಕ್ಕಿದೆ. ಸ್ವಗ್ರಾಮದಲ್ಲಿ ವಿನೇಶ್ಗೆ ಚಿನ್ನದ ಪದಕ ತೊಡಿಸಿ ಗೌರವಿಸಲಾಯ್ತು. ಬಹುಮಾನವಾಗಿ ಸಾಕಷ್ಟು ಹಣ ಕೂಡ ಹರಿದುಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿನೇಶ್ ಫೋಗಟ್ ಪತಿ ಬಿಚ್ಚಿಟ್ಟ ಸತ್ಯ !
ವಿನೇಶ್ 16 ಕೋಟಿ ಪಡೆದಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಪತಿ ಸೋಮವೀರ್ ರಾಠಿ ಉತ್ತರ ನೀಡಿದ್ದಾರೆ. ಸೋಮವೀರ್ ರಾಠಿ ಟ್ವೀಟ್ ಮಾಡಿ 16 ಕೋಟಿ ಹಣವನ್ನು ವಿನೇಶ್ ಪಡೆದಿಲ್ಲ, ಅಗ್ಗದ ಜನಪ್ರಿಯತೆಗಾಗಿ ಇಂತಹ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ವಿನೇಶ್ ಫೋಗಟ್ ಈವರೆಗೆ ಎಷ್ಟು ಬಹುಮಾನ ಮೊತ್ತ ಪಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತರಿಗೆ ನೀಡಲಾಗುವಷ್ಟೇ ಮೊತ್ತವನ್ನು ವಿನೇಶ್ಗೆ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿತ್ತು.
ವಿನೇಶ್ ಫೋಗಟ್ಗೆ ಭಾರತಕ್ಕೆ ಮರಳಿದ ನಂತರ ಭವ್ಯವಾದ ಸ್ವಾಗತ ನೀಡಲಾಯಿತು. ಸ್ವಗ್ರಾಮ ಬಳಲಿಯಲ್ಲಿ ಸನ್ಮಾನ ಸಹ ಮಾಡಲಾಗಿದೆ. ವರದಿಗಳ ಪ್ರಕಾರ ಅಕಾಡೆಮಿ ತೆರೆಯಲು ಆಕೆಗೆ ಹಣ ಮತ್ತು ಭೂಮಿಯನ್ನು ನೀಡಲಾಗಿದೆಯಂತೆ. ಇದು ನಿಜವಾಗಿದ್ದರೆ ಮನು ಭಾಕರ್ ಮತ್ತು ನೀರಜ್ ಚೋಪ್ರಾ ಅವರಿಗಿಂತ 3 ರಿಂದ 4 ಪಟ್ಟು ಹೆಚ್ಚು ಹಣವನ್ನು ವಿನೇಶ್ ಪಡೆದಂತಾಗುತ್ತದೆ.
ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಕ್ಕಾಗಿ ಹರಿಯಾಣ ಸರ್ಕಾರವು ಮನು ಭಾಕರ್ಗೆ 5 ಕೋಟಿ ರೂಪಾಯಿಗಳನ್ನು ನೀಡಿದೆ. ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ 4 ಕೋಟಿ ರೂಪಾಯಿ ಪಡೆದಿದ್ದಾರೆ.