
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಶಾಲಾ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ 9 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಉರಗ ತಜ್ಞ ಅಜಯ್ ಗಿರಿ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಅಡುಗೆ ಸಹಾಯಕಿ ಪ್ರೇಮಾ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಶಾಲೆಗೆ ಮಕ್ಕಳು ಕೂಡ ಆಗಮಿಸಿದ್ದರು. ಆದರೆ, ಶಾಲಾ ಕೊಠಡಿ ಮತ್ತು ಬಿಸಿಯೂಟ ದಾಸ್ತಾನು ಕೊಠಡಿಗೆ ಸ್ವಲ್ಪ ದೂರವಿದ್ದು, ಮಕ್ಕಳು ಇಲ್ಲಿಗೆ ಬಂದಿರಲಿಲ್ಲ. ಮುಖ್ಯ ಶಿಕ್ಷಕ ಸುಪ್ರೀತ್ ಡಿಸೋಜ ಹಾವು ಇದ್ದ ಕೊಠಡಿಯ ಬಾಗಿಲು ಹಾಕಿದ್ದಾರೆ.
ನಂತರ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಅವರ ಮೂಲಕ ಅಜಯ್ ಗಿರಿ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಜಯ್ ಗಿರಿ ಕಾಳಿಂಗ ಸರ್ಪವನ್ನು ಸೆರೆಹಿಡಿದು, ಮಕ್ಕಳು, ಶಿಕ್ಷಕರು, ಪೋಷಕರಿಗೆ ಕಾಳಿಂಗ ಸರ್ಪ ಕಂಡು ಬಂದಾಗ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ನಗರ ವಲಯ ಅರಣ್ಯ ಅಧಿಕಾರಿ ಸಂತೋಷ್ ಮಲ್ಲನಗೌಡರ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.