ಶಿವಮೊಗ್ಗ: ಲೋಕಕ್ಕೆ ಅನ್ನವನೀಡುವ ರೈತ ಹಾಗೂ ರೈತರ ಬದುಕು, ಕೃಷಿ ಚಟುವಟಿಕೆಗಳ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ. ನಗರಗಳ ಶಾಲೆಗಳಲ್ಲಿ ಮಕ್ಕಳಿಗೆ ರೈತರು, ಕೃಷಿ ಚಟುವಟಿಕೆ ಬಗ್ಗೆ ಪಾಠ ಮಾಡಿದರೂ ಪ್ರಾಯೋಗಿಕವಾಗಿ ತಿಳಿಸಿಕೊಡುವುದ ಕಷ್ಟ ಸಾಧ್ಯ. ಆದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರುವು ಮೂಡಿಸುವುದು ಸುಲಭ. ಶಿವಮೊಗ್ಗದ ಖಾಸಗಿ ಶಾಲೆಯೊಂದರ ಮಕ್ಕಳಿಗೆ ಕೃಷಿ ಚಟುವಟಿಕೆ ಬಗ್ಗೆ ಪ್ರಾಯೋಗಿಕವಾಗಿ ಪಾಠ ಮಾಡಲಾಗಿದ್ದು, ವಿದ್ಯಾರ್ಥಿಗಳು ಕೆಸರು ಗದ್ದೆಗಿಳಿದು ಭತ್ತದ ನಾಟಿ ಮಾಡಿ ಸಂಭ್ರಮಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ಗಣಿವಾರದ ಕೊದಚಾದ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಪಾಠ ಮಾಡಲಾಗಿದೆ. ಅಧ್ಯಯದ ಭಾಗವಾಗಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗದ್ದೆಗೆ ಹೋಗಿ ಭತ್ತದ ನಾಟಿ ಮಾಡಿ, ರೈತ ಚಟುವಟಿಕೆಗಳ ಬಗ್ಗೆ ಅನುಭವ ಪಡೆದಿದ್ದಾರೆ.
ಕಲಿಕೆ ಎಂಬುದು ಕೇವಲ ಪಠ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು. ಕೆಸರು ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ವಿಧಾನ, ಭತ್ತದ ಗಿಡ ಬೆಳೆದು ಪೈರು ಬರುವ ರೀತಿ, ಮೊದಲಾದ ಕೃಷಿ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಗಿದೆ. ಮಕ್ಕಳು ಗದ್ದೆಗಳಲ್ಲಿ ನಾಟಿ ಮಾಡಿ ಸ್ವತಃ ಅನುಭವ ಪಡೆದುಕೊಂಡಿದ್ದಾರೆ. ಇದೇ ವೇಳೆ ಕಂಬಳ ಸಂಭ್ರಮದ ಅನುಭವವನ್ನೂ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.