ತೆಲಂಗಾಣದಲ್ಲಿ ನಡೆದಿರುವ ಘಟನೆಯೊಂದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಲ್ಲೆದೆಯವರನ್ನೂ ಕರಗಿಸುವಂತಿದೆ. ತನ್ನ ತಾಯಿಯನ್ನು ಕಳೆದುಕೊಂಡ ಕಡುಬಡ ಕುಟುಂಬದ ಪುಟ್ಟ ಬಾಲಕಿಯೊಬ್ಬಳು ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ತನ್ನ ತಾಯಿಯ ಶವದ ಪಕ್ಕದಲ್ಲೇ ಬಟ್ಟೆಯೊಂದನ್ನು ಹಾಸಿಕೊಂಡು ಭಿಕ್ಷೆ ಬೇಡಿದ್ದಾಳೆ. ಬಳಿಕ ಬಾಲಕಿಯ ಪರಿಸ್ಥಿತಿಯನ್ನು ಕಂಡು ಮನಕರಗಿದ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರು ಹಣಕಾಸಿನ ನೆರವು ನೀಡಿದ್ದಾರೆ.
ಇಂತಹದೊಂದು ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ತನೂರು ಮಂಡಲ ವ್ಯಾಪ್ತಿಯ ಬೇಲ್ ತರೋದಾ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ 11 ವರ್ಷದ ಬಾಲಕಿ ದುರ್ಗಾ ತನ್ನ ತಂದೆ ಮತ್ತು ತಾಯಿ ಗಂಗಾಮಣಿಯೊಂದಿಗೆ ವಾಸಿಸುತ್ತಿದ್ದಳು. ಕೆಲ ತಿಂಗಳ ಹಿಂದೆ ದುರ್ಗಾಳ ತಂದೆ ಅನಾರೋಗ್ಯದಿಂದ ತೀರಿಕೊಂಡಿದ್ದು, ತಾಯಿ ಗಂಗಾಮಣಿ ಕೂಲಿನಾಲಿ ಮಾಡಿಕೊಂಡು ಮಗಳನ್ನು ಸಾಕುತ್ತಿದ್ದರು. ಆದರೆ ಇತ್ತೀಚೆಗೆ ಊಟಕ್ಕೂ ಪರದಾಡುವ ಪರಿಸ್ಥಿತಿ ತಾಯಿ – ಮಗಳಿಗೆ ಎದುರಾಗಿದ್ದು, ಇದರಿಂದ ಬೇಸತ್ತ ಗಂಗಾಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರ ಪ್ರಪಂಚ ಏನೆಂಬುದರ ಅರಿವೇ ಇರದ 11 ವರ್ಷದ ದುರ್ಗಾ ಈಗ ಅನಾಥಳಾಗಿದ್ದು, ಈಕೆಗೆ ಬಂಧುಗಳು ಸಹ ಯಾರೂ ಇಲ್ಲವೆನ್ನಲಾಗಿದೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂಬುದರ ಮಾಹಿತಿ ಇಲ್ಲದ ದುರ್ಗಾ ತನ್ನ ತಾಯಿಯ ಶವದ ಪಕ್ಕದಲ್ಲಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಹಣ ಹೊಂದಿಸಲು ಭಿಕ್ಷೆ ಬೇಡಿದ್ದಾಳೆ. ಈ ಘಟನೆ ಆತ್ಮಹತ್ಯೆ ಪ್ರಕರಣದ ತನಿಖೆಗೆ ಬಂದಿದ್ದ ಪೊಲೀಸ್ ಅಧಿಕಾರಿಯ ಮನ ಕರಗಿಸಿದ್ದು, ಹಣಕಾಸಿನ ನೆರವು ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರು ಸಹ ಮುಂದೆ ನಿಂತು ಗಂಗಾಮಣಿಯ ಅಂತ್ಯಕ್ರಿಯ ನೆರವೇರಿಸಿದ್ದು, ಮಾನವೀಯತೆ ಇನ್ನೂ ಇದೆ ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲದೆ ಅನಾಥಳಾಗಿರುವ ದುರ್ಗಾಳಿಗೆ ಎಲ್ಲ ರೀತಿಯಲ್ಲೂ ನೆರವು ನೀಡುವ ಭರವಸೆ ನೀಡಿದ್ದಾರೆ.