
ನವದೆಹಲಿ: 140 ಕೋಟಿ ಜನರ ಶಕ್ತಿಯಿಂದ ಎಲ್ಲವೂ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯ ದಿನಚಾರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
140 ಕೋಟಿ ಜನ ನನ್ನ ಕುಟುಂಬ ಇದ್ದಂತೆ. ಈ ಜನರ ಶಕ್ತಿ ಏನೆಂಬುದು ಜಗತ್ತಿಗೆ ಗೊತ್ತಿದೆ. 2047ರಲ್ಲಿ ವಿಕಸಿತ ಭಾರತದ ಕನಸು ನನಸಾಗಲಿದೆ. 140 ಕೋಟಿ ಜನರ ಶಕ್ತಿಯಿಂದ ಎಲ್ಲವೂ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಹಲವರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ಹೋರಾಡಿದ ಮಹಾಪುರುಷರಿಗೆ ನಾವು ಋಣಿಯಾಗಿದ್ದೇವೆ. ದೇಶಕ್ಕಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ನಾವು ಸಂಕಲ್ಪ ಮಾಡಿದಂತೆ ಸಮೃದ್ಧ ಭಾರತ ನಿರ್ಮಾಣ ಮಾಡೋಣ. ದೇಶಕ್ಕಾಗಿ ಪ್ರಾಣ ನೀಡಬೇಕಾದ ಕಾಲವೊಂದಿತ್ತು. ಈಗ ದೇಶಕ್ಕಾಗಿ ಜೀವಿಸಬೇಕಾದ ಕಾಲವಿದೆ. ಕೋಟಿ ಕೋಟಿ ಜನರ ಕನಸನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವರು ಸಾವನ್ನಪ್ಪಿದ್ದಾರೆ. ವಯನಾಡು ಜನರ ನೋವಿನ ಜೊತೆಗೆ ನಾವಿದ್ದೇವೆ ಎಂದು ಮೋದಿ ಹೇಳಿದ್ದಾರೆ.