ಚಿಕ್ಕಮಗಳೂರು: ಬಾಬಾಬುಡನ್ ಗಿರಿಯ ದತ್ತಪೀಠಕ್ಕೆ ಡ್ರೆಸ್ ಕೋಡ್ ಜಾರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೈಯದ್ ಬುಡೇನ್ ಶಾಖಾದ್ರಿ ಕುಟುಂಬದವರು ಮನವಿ ಮಾಡಿದ್ದಾರೆ.
ಮೂರು ದಶಕಗಳಿಂದ ಬಾಬಾಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದ ವಿಚಾರವಾಗಿ ಹೋರಾಟ ನಡೆಯುತ್ತಲೇ ಇದೆ. ಈ ಮಧ್ಯೆ ಮುಸ್ಲಿಂ ಸಂಘಟನೆಗಳು ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದೆ.
ದತ್ತಪೀಠದಲ್ಲಿ ಡ್ರೆಸ್ ಕೋಡ್ ಜೊತೆಗೆ ರಸ್ತೆಯುದ್ದಕ್ಕೂ ಇರುವ ದತ್ತಪೀಠ ನಾಮಫಲಕಗಳ ಬದಲಾಗಿ ಗೆಜೆಟೆಡ್ ದಾಖಲೆಯಂತೆ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಬದಲಿಸಬೇಕು. ಬಿಜೆಪಿ ಸರ್ಕಾರ ದರ್ಗಾವನ್ನು ಮಾಯಮಾಡಿದೆ ಎಂದು ದೂರಿದ್ದಾರೆ.
ಇನಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಪವಿತ್ರವಾದ ಸ್ಥಳ. ಇಲ್ಲಿ ಮೊದಲು ಹೇಗೆ ಭಾರತೀಯ ಸಂಪ್ರದಾಯದಂತೆ ಉಡುಗೆ-ತೊಡುಗೆ ತೊಟ್ಟು ಬರುತ್ತಿದ್ದರೋ ಈಗಲೂ ಅದೇ ರೀತಿ ಡ್ರೆಸ್ ಕೋಡ್ ಜಾರಿಗೊಳಿಸುವಂತೆ ಶಾಖಾದ್ರಿ ವಂಶಸ್ಥರು ಮನವಿ ಮಾಡಿದ್ದಾರೆ. ಅವರವರ ಉಡುಗೆ ಅವರವರ ಸ್ವಾತಂತ್ರ್ಯ. ಆದರೆ ಇನಾಂ ದತ್ತಾತ್ರೇಯ ಪೀಠಕ್ಕೆ ಬರುವಾಗ ಸೀರೆ, ಚೂಡಿದಾರ್, ಬುರ್ಖಾ, ಕುರ್ತಾ ಡ್ರೆಸ್ ಕೋಡ್ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸ್ಥಳದಲ್ಲಿ ದೇವರು, ದರ್ಗಾ, ಗೋರಿ,ಮಸೀದಿ ಎಲ್ಲವೂ ಇದೆ. ಈ ಸ್ಥಳದಲ್ಲಿ ಆಧುನಿಕ ಬಟ್ಟೆ ಹಾಕಿಕೊಂಡುಬರುವುದು ಸರಿಯಲ್ಲ. ಹಾಗಾಗಿ ಡ್ರೆಸ್ ಕೋಡ್ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.