ಬೆಂಗಳೂರು : ಮುಡಾ ವಿಚಾರದಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ, ಬೇಡಿಕೆ ಇಟ್ಟಿಲ್ಲ, ಶಿಫಾರಸ್ಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನಿದೆ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಜಮೀನು ಅಕ್ರಮವಾಗಿ ವಶಕ್ಕೆ ಪಡೆದು ಸೈಟು, ಪಾರ್ಕ್, ರಸ್ತೆ ಮಾಡಿ ಹಂಚಿಬಿಟ್ಟರು. ಇಲ್ಲಿ ತಪ್ಪು ಮಾಡಿರುವುದು ಮುಡಾ. ತಪ್ಪು ಒಪ್ಪಿಕೊಂಡು ನಂತರ ನನ್ನ ಕುಟುಂಬಕ್ಕೆ ಬದಲಿ ನಿವೇಶನ ನೀಡಿದ್ದಾರೆ. ನನ್ನ ಪತ್ನಿ ಬದಲಿ ಜಮೀನು ಕೊಡಿ ಎಂದು ಅರ್ಜಿ ಹಾಕಿದ್ದರೇ ವಿನಃ ಯಾವುದೇ ನಿರ್ಧಿಷ್ಟ ಜಾಗದಲ್ಲಿ ನಿವೇಶನ ಕೊಡಿ ಎಂದು ಕೇಳಿರಲಿಲ್ಲ. ನಿವೇಶನ ಕೊಟ್ಟವರು ಸರ್ಕಾರದವರು. ಈಗ ಹಗರಣ ನಡೆದಿದೆ ಎನ್ನುತ್ತಿರುವವರು ಅವರೇ. ಇದರಲ್ಲೇ ಅವರ ಉದ್ದೇಶ ಏನಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ. ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ. ಈಗ ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಕುಮಾರಸ್ವಾಮಿ. ಯಡಿಯೂರಪ್ಪ, ವಿಜಯೇಂದ್ರ, ಆರ್ ಅಶೋಕ್ ಸೇರಿದ್ದಾರೆ. ಕುಮಾರಸ್ವಾಮಿ ವಿರುದ್ಧ, ನಿರಾಣಿ ವಿರುದ್ಧ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮದ್ರೋಹ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.