ಇತ್ತೀಚಿನ ದಿನಗಳಲ್ಲಿ ರೀಲ್ಸ್ ಗಾಗಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗಿದೆ. ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದರ ಜೊತೆಗೆ ಬೇರೆಯವರ ಜೀವಕ್ಕೂ ಅಪಾಯವನ್ನು ತಂದೊಡ್ಡುತ್ತಾರೆ ಕೆಲವರು. ರೀಲ್ಸ್ ಗಾಗಿ ರೈಲ್ವೆ ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇಟ್ಟಿದ್ದ ಯುಟ್ಯೂಬರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಗುಲ್ಜಾರ್ ಶೇಖ್ ಬಂಧಿತ ಯೂಟ್ಯೂಬರ್. ಉತ್ತರ ಪ್ರದೇಶದ ಖಂಡ್ರೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಲ್ಜಾರ್ ಶೇಖ್, ರೀಲ್ಸ್ ಗಾಗಿ ರೈಲ್ವೆ ಹಳಿ ಮೇಲೆ ಸೈಕಲ್, ಸಿಲಿಂಡರ್, ಕಲ್ಲುಗಳು ಸೇರಿದಂತೆ ಹಲವು ವಸ್ತುಗಳನ್ನು ಇಟ್ಟಿದ್ದ.
ಈತನ ಅಪಾಯಕಾರಿ ಚಟುವಟಿಕೆಗಳ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಪಿಎಫ್ ತಂಡ ಗುಲ್ಜಾರ್ ನ ಖಂಡ್ರೌಲಿ ಗ್ರಾಮದ ಮನೆಯಿಂದ ಬಂಧಿಸಿ ಕರೆದೊಯ್ದಿದೆ.
ಬಂಧಿತ ರೈಲ್ವೆ ಹಳಿಗಳ ಮೇಲೆ ಹಲವು ಅಪಾಯಕಾರಿ ವಸ್ತುಗಳನ್ನು ಇಟ್ಟು ವಿಡಿಯೋಗಳನ್ನು ಮಾಡಿ ತನ್ನ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ. ಟ್ರೇನ್ ಟ್ರ್ಯಾಕ್ ಮೇಲೆ ಕಲ್ಲು, ಸಾಬೂನು, ಸೈಕಲ್, ಸಿಲಿಂಡರ್, ಇಟ್ಟಿಗೆ, ಮೊಬೈಲ್, ಸುತ್ತಿಗೆ, ಮೋಟಾರ್ ಹೀಗೆ ವಿವಿಧ ವಸ್ತುಗಳನ್ನು ಇಟ್ಟು, ಇಂತಹ ವಸ್ತುಗಳ ಮೇಲೆ ರೈಲು ಹಾದು ಹೋದಾಗ ಏನಾಗುತ್ತದೆ ಎಂಬುದನ್ನು ತೋರಿಸುವ ಹಲವು ವಿಡಿಯೋ ಗಳನ್ನು ಹಂಚಿಕೊಂಡಿದ್ದಾನೆ. ಗುಲ್ಜಾರ್ ನ ಈ ಹುಚ್ಚಾಟದಿಂದ ರೈಲ್ವೆ ಪ್ರಯಾಣಿಕರ ಜೀವಕ್ಕೆ ಸಂಚಾಕಾರ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.