ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಟ್ರ್ಯಾಕ್ ಗೆ ನಾಲ್ಕು ವರ್ಷದ ಮಗು ಜಿಗಿದು, ಅವಾಂತರ ಸೃಷ್ಟಿಸಿರುವ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಗೆ ತೆರಳಲೆಂದು ತಾಯಿ ಹಾಗೂ ನಾಲ್ಕು ವರ್ಷದ ಮಗು ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಮೆಟ್ರೋಗೆ ಕಾಯುತ್ತಿದ್ದ ವೇಳೆ ಆಟವಾಡುತ್ತ ನಿಂತಿದ್ದ ಮಗು ಏಕಾಏಕಿ ಮೆಟ್ರೋ ಟ್ರ್ಯಾಕ್ ಗೆ ಜಿಗಿದುಬಿಟ್ಟಿದೆ. ಸ್ಥಳದಲ್ಲಿದ್ದ ಇಬ್ಬರು ಮೆಟ್ರೋ ಸಿಬ್ಬಂದಿಗಳು ತಕ್ಷಣ ಟ್ರ್ಯಾಕ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ.
ಮಗುವನ್ನು ರಕ್ಷಿಸಿ ಮೇಲಕೆತ್ತಲಾಗಿದೆ. ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮಗು ಬಚಾವ್ ಆಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೆಲ ಕಾಲ ಬೈಯ್ಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯಗೊಂಡಿತ್ತು.