ನವದೆಹಲಿ: ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಕಿಡಿ ಕಾರಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಸ್ತಾಪಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಬಜೆಟ್ ನಲ್ಲಿ ಹೆಚ್ಚು ಹಣ ನೀಡಿಲ್ಲ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಂಡ್ ಗೆ ನೀಡಿದ ಹಣದಲ್ಲಿ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ಎಸ್.ಸಿ., ಎಸ್.ಟಿ. ಫಂಡ್ ಗೆ ನೀಡಲಾದ 9980 ಕೋಟಿ ರೂ.ನಲ್ಲಿ 4301 ಕೋಟಿ ರೂ.ಗಳನ್ನು ಟ್ರೈಬಲ್ ಸಬ ಪ್ಲಾನ್ ನಿಂದಲೇ ತೆಗೆಯಲಾಗಿದೆ. ಆ ಹಣ ಎಲ್ಲಿ ಹೋಗಿದೆ ಎಂದು ಗೊತ್ತಿಲ್ಲ. ಇಲ್ಲಿಯವರೆಗೆ ಕರ್ನಾಟಕ ಸರ್ಕಾರ 2220 ಕೋಟಿ ರೂ. ವೆಚ್ಚ ಮಾಡಿದೆ. ಇದರಲ್ಲಿ ಎಸ್ಸಿ, ಎಸ್ಟಿ ಸಬ್ ಪ್ಲಾನ್ ನ 1587 ಕೋಟಿ ರೂ.,ಟ್ರೈಬಲ್ ಸಬ್ ಪ್ಲ್ಯಾನ್ ನ 641 ಕೋಟಿ ರೂ. ಸೇರಿದೆ. ಆ ಹಣ ಏನಾಯ್ತು ಎಂದು ವಿಪಕ್ಷದವರು ಕರ್ನಾಟಕ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪಿಸಿದ ಅವರು, ವಾಲ್ಮೀಕಿ ನಿಗಮದಲ್ಲಿ 189 ಕೋಟಿ ರೂಪಾಯಿ ಎಸ್ಸಿ, ಎಸ್ಟಿ ಹಣ ಲಪಟಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಲ್ಲಿನ ಮುಖ್ಯಮಂತ್ರಿಗಳು ಲೂಟಿ ಆಗಿರುವುದು 189 ಅಲ್ಲಮ 89 ಕೋಟಿ ರೂಪಾಯಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.