ಬೆಂಗಳೂರು: ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಶೇಷ ಭತ್ಯೆ ಭಾಗ್ಯ ದೊರೆತಿದೆ. 2000 ರೂ.ನಿಂದ 3500 ರೂ.ವರೆಗೆ ವಿಶೇಷ ಭತ್ಯೆ ನೀಡಲಾಗುವುದು. ಗಾರ್ಡ್, ಡಿ ದರ್ಜೆ, ಗುತ್ತಿಗೆ ಸಿಬ್ಬಂದಿಗೂ ಸೌಲಭ್ಯ ಸಿಗಲಿದೆ.
ಈ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಯ ಹಲವು ದಿನಗಳ ಬೇಡಿಕೆ ಈಡೇರಿದಂತಾಗಿದೆ. ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಮುಂಚೂಣಿ ಸಿಬ್ಬಂದಿ ಅನುಕೂಲಕ್ಕಾಗಿ ವಿಶೇಷ ಭತ್ಯೆ ನೀಡಲು ಅರಣ್ಯ ಇಲಾಖೆ ಆದೇಶಿಸಿದೆ.
ಅರಣ್ಯ ಸಂರಕ್ಷಣೆಗಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ಮಾಸಿಕ ವಿಶೇಷ ಭತ್ಯೆ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ವಲಯ ಅರಣ್ಯ ಅಧಿಕಾರಿ, ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3 ಸಾವಿರ ರೂ., ಅರಣ್ಯ ರಕ್ಷಕರಿಗೆ 2700 ರೂ., ಡಿ ದರ್ಜೆ ನೌಕರರಿಗೆ 2000 ರೂ. ನೀಡಲು ನಿರ್ಧರಿಸಿದ್ದು, ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.