ವಿಜಯನಗರ: ರಣಮಳೆಗೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಯೋಮಯವಾಗಿದೆ. ಭಾರಿ ಮಳೆಯಿಂದ ತುಂಗಭದ್ರಾ ಜಲಾಶಯಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಜಲಾಶಯದಿಂದ 1.17 ಲಕ್ಷ ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಂಪಿಯಲ್ಲಿ ಹಲವು ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಇನ್ನೊಂದೆಡೆ ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದರಿಂದ ಹಂಪಿಯಿಂದ ವಿರಾಪುರ ಗಡ್ಡೆಗೆ ಬೋಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಹಂಪಿಯ ಪುರಂದರ ಮಂಟಪ, ವಿಧಿ-ವಿಧಾನ ಮಂಟಪ, ಸ್ನಾನ ಘಟ್ಟ ಮುಳುಗಡೆಯಾಗಿವೆ. ಕೋದಂಡರಾಮ ದೇವಸ್ಥಾನ, ಸೀತಾಸೆರಿಗೂ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ಹೋಗುವ ಮಾರ್ಗಗಳು ಸಂಪೂರ್ಣ ಜಲಾವೃತಗೊಂಡಿವೆ.
ಇನ್ನೊಂದೆಡೆ ಕಂಪ್ಲಿ ಹಾಗೂ ಸಿರಗುಪ್ಪ ತಾಲೂಕುಗಳಲ್ಲಿಯೂ ಪ್ರವಾಹದ ಆತಂಕ ಎದುರಾಗಿದೆ. ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಕಂಪ್ಲಿ-ಗಂಗಾವತಿ ಸಂಪರ್ಕ ಬಂದ್ ಆಗಿದೆ. ವಿವಿಧೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ನಾಶವಾಗಿವೆ. ರಾಜ್ಯದಲ್ಲಿ ರಣಮಳೆ ಸಂಕಷ್ಟತಂದೊಂಡಿದೆ.