ನವದೆಹಲಿ: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ ಹಾಗೂ ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ದೆಹಲಿ ತಲುಪಿದ್ದು, ಸಂಸತ್ ಆವರಣದಲ್ಲಿ ಬಿಜೆಪಿ ಸಂಸದರು ಹೋರಾಟ ನಡೆಸಿದ್ದಾರೆ.
ವಾಲ್ಮೀಕಿ ನಿಗಮ, ಮೂಡಾ ಅಕ್ರಮ ಪ್ರಕರಣ ಖಂಡಿಸಿ ರಾಜ್ಯ ಬಿಜೆಪಿ ಒಂದೆಡೆ ಪಾದಯಾತ್ರೆಗೆ ಸಿದ್ಧತೆ ನಡೆಸಿದೆ. ಇನ್ನೊಂದೆಡೆ ದೆಹಲಿವರೆಗೂ ಹೋರಾಟ ಕೊಂಡೊಯ್ಯಲಾಗಿದ್ದು, ಇಂದು ಸಂಸತ್ ಭವನದ ಆವರಣದಲ್ಲಿ ರಾಜ್ಯ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಸಂಸದರು, ಮುಡಾ ಅಕ್ರಮ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ತನಿಖೆಗೆ ಎದುರಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಹಣ ರಾಹುಲ್ ಗಾಂಧಿ ಜೇಬಿಗೆ ಹೋಗಿದೆ. ಈ ನಿಟ್ಟಿನಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಮಂಜುನಾಥ್, ಗೋವಿಂದ ಕಾರಜೋಳ, ವಿ.ಸೋಮಣ್ಣ ಸೇರಿದಂತೆ ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.