ಬಜೆಟ್ ನಂತರ ಕಾರ್ಪೊರೇಟ್ ವಲಯದಿಂದ ಪ್ರತಿಕ್ರಿಯೆ ಬರಲಾರಂಭಿಸಿವೆ. ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಕಾರ್ಯದಲ್ಲಿ ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವುದಾಗಿ ಆನಂದ್ ಮಹೀಂದ್ರಾ ಹೇಳಿದ್ದಾರೆ. ಬುಧವಾರ ಪೋಸ್ಟ್ ಹಂಚಿಕೊಂಡ ಅವರು, ಭಾರತದ ಖಾಸಗಿ ವಲಯವು ಉದ್ಯೋಗವನ್ನು ಸೃಷ್ಟಿಸುವ ಮತ್ತು ಯುವಕರನ್ನು ಉದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಬೇಕಾಗಿದೆ. 2024-25ರ ಹಣಕಾಸು ವರ್ಷದ ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯಿಸಿದ ಅವರು, ಉದ್ಯೋಗ ಸೃಷ್ಟಿಯ ಜೊತೆಗೆ ಬೆಳವಣಿಗೆಯ ಮಹತ್ವವನ್ನು ಸರ್ಕಾರ ಗುರುತಿಸುತ್ತದೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಯೋಜನೆಗಳು ಭರವಸೆದಾಯಕವಾಗಿವೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಖಾಸಗಿ ವಲಯವೂ ತನ್ನ ಪಾತ್ರವನ್ನು ವಹಿಸುವಂತೆ ಒತ್ತಾಯಿಸಿದ ಆನಂದ್ ಮಹೀಂದ್ರ, ಉದ್ಯೋಗ ನೀಡುವ ನಿಟ್ಟಿನಲ್ಲಿ ಹೂಡಿಕೆ ಮಾಡಲು ಮುಂದೆ ಬಂದು, ಖಾಸಗಿ ವಲಯ ತನ್ನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ ಎಂದಿದ್ದಾರೆ. ಈ ಕಾರ್ಯಕ್ಕೆ ನಾವೆಲ್ಲರೂ ಒಗ್ಗೂಡದಿದ್ದರೆ, ಜನಸಂಖ್ಯಾ ಲಾಭಾಂಶವು ಜನಸಂಖ್ಯಾ ಬಿಕ್ಕಟ್ಟಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಸಿದ್ದಾರೆ.