
ಕೋಲಾರ: ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಬ್ಬರು ಹೊಡೆದಾಡಿಕೊಂಡಿದ್ದು, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ಬೆಳಗ್ಗೆ ವಿದ್ಯಾರ್ಥಿನಿಯರು ಪ್ರಾರ್ಥನೆ ಮುಗಿಸಿ ತರಗತಿಗೆ ತೆರಳುವ ಸಂದರ್ಭದಲ್ಲಿ ಕಾಲೇಜಿನ ಕಾರಿಡಾರ್ ನಲ್ಲಿ ಉಪನ್ಯಾಸಕರಾದ ನಾಗಾನಂದ ಕೆಂಪರಾಜು ಮತ್ತು ಜೆ.ಜಿ. ನಾಗರಾಜ್ ಅವರು ಹೊಡೆದಾಡಿಕೊಂಡಿದ್ದಾರೆ.
ಇಬ್ಬರ ನಡುವೆ 2021 ರಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಂದರ್ಭದಲ್ಲಿ ಮನಸ್ತಾಪ ಉಂಟಾಗಿತ್ತು. ಜಾಲತಾಣಗಳಲ್ಲಿ ಚಕಮಕಿ ನಡೆಯುತ್ತಿತ್ತು. ಮಂಗಳವಾರ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ.
ನಾಗರಾಜ್ ಕನ್ನಡಕ ಒಡೆದು ಮುಖ ಊದಿಕೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಾನಂದ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಪಿಯು ಕಾಲೇಜಿನಲ್ಲಿ ಸುಮಾರು ಸಾವಿರ ಹೆಣ್ಣು ಮಕ್ಕಳು ಓದುತ್ತಿದ್ದು, ಮಾದರಿಯಾಗಿರಬೇಕಿದ್ದ ಉಪನ್ಯಾಸಕರು ಹೊಡೆದಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.