ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಸೃಷ್ಟಿಯಾಗಿರುವ ಅನಾಹುತ, ಅವಾಂತರಗಳು ಒಂದೆರಡಲ್ಲ. ಅಂಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿದು 7 ಜನರು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಉಡುಪಿಯಲ್ಲಿ ನೂತನ ಸೇತುವೆಯೊಂದು ಕುಸಿದು ಬಿದ್ದು ಅಧ್ವಾನವುಂಟಾಗಿದೆ.
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ವರ್ಷದ ಹಿಂದಷ್ಟೇ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ.
ಕುಂದಾಪುರ ತಾಲೂಕಿನ ಭರಣಕೊಳ್ಕಿಯಲ್ಲಿ ಹಾಲಾಡಿ, ಜೋರಾಡಿ, ಮದ್ದೂರು ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ಗ್ರಾಮಸ್ಥರು, ವಿದ್ಯಾರ್ಥಿಗಳು ತೆರಳಲು ಮಾರ್ಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಒಂದು ವರ್ಷದ ಹಿಂದೆ 25 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಂಡಿತ್ತು. ಕಳಪೆ ಕಾಮಗಾರಿಯಿಂದಾಗಿ ಒಂದೇ ಮಳೆಗೆ ಕುಸಿದು ಬಿದ್ದಿದೆ. ಈ ಭಾಗದ ಗ್ರಾಮಸ್ಥರು ಓಡಾಟಕ್ಕೆ ಇದೇ ಸೇತುವೆಯನ್ನು ಅವಲಂಭಿಸಿದ್ದಾರೆ. ಈಗ ಸೇತುವೆ ಬಿದ್ದುಹೋಗಿರುವ ಪರಿಣಾಮ ಸಂಚಾರಕ್ಕೆ ಅಸಾಧ್ಯವಾಗಿದೆ.