ಮುಂಬೈನಲ್ಲಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಜ್ಯೋತಿರ್ಮಠದ 46 ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ, ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಠಾಕ್ರೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೋಡುವವರೆಗೂ ತಮ್ಮ ನೋವು ಕಡಿಮೆಯಾಗುವುದಿಲ್ಲ ಎಂದಿದ್ದಾರೆ.
ಉದ್ಧವ್ ಠಾಕ್ರೆಗೆ ಆದ ದ್ರೋಹ ನಮ್ಮೆಲ್ಲರ ದುಃಖಕ್ಕೆ ಕಾರಣವಾಗಿದೆ ಎಂದು ನಾನು ಉದ್ಧವ್ ಠಾಕ್ರೆಗೆ ಹೇಳಿದ್ದೇನೆ. ಮೋಸ ಮಾಡುವ ವ್ಯಕ್ತಿ ನಿಜವಾದ ಹಿಂದೂವಾಗಲು ಸಾಧ್ಯವಿಲ್ಲ. ಈ ದ್ರೋಹದಿಂದ ಮಹಾರಾಷ್ಟ್ರದ ಜನತೆ ಸಂಕಷ್ಟಕ್ಕೆ ಸಿಲುಕಿರುವುದು ಚುನಾವಣಾ ಫಲಿತಾಂಶದಿಂದ ಗೊತ್ತಾಗಿದೆ ಎಂದು ಅವಿಮುಕ್ತೇಶ್ವರಾನಂದರು ಹೇಳಿದ್ದಾರೆ.
ಪುಣ್ಯ ಮತ್ತು ಪಾಪದ ಬಗ್ಗೆ ಮಾತನಾಡಿದ ಅವರು, ದ್ರೋಹವನ್ನು ಘೋರ ಪಾಪವೆಂದು ಹೇಳಿದ್ದಾರೆ. ಜನರಿಂದ ಆಯ್ಕೆಯಾದ ನಾಯಕನಿಗೆ ದ್ರೋಹ ಬಗೆದರೆ ಜನಾದೇಶಕ್ಕೆ ಅಪಮಾನ ಮಾಡಿದಂತೆ ಎಂದು ಮಹಾರಾಷ್ಟ್ರದ ರಾಜಕೀಯ ಅವ್ಯವಸ್ಥೆಯನ್ನು ಸ್ವಾಮಿಗಳು ಟೀಕಿಸಿದ್ದಾರೆ.