alex Certify ಬಂಗಾಳದಲ್ಲಿ ಎಲ್ಲಾ 4 ಸ್ಥಾನ ಗೆದ್ದ ಟಿಎಂಸಿ: ಉತ್ತರಾಖಂಡದ 2 ಕ್ಷೇತ್ರಗಳನ್ನೂ ಜಯಿಸಿದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗಾಳದಲ್ಲಿ ಎಲ್ಲಾ 4 ಸ್ಥಾನ ಗೆದ್ದ ಟಿಎಂಸಿ: ಉತ್ತರಾಖಂಡದ 2 ಕ್ಷೇತ್ರಗಳನ್ನೂ ಜಯಿಸಿದ ಕಾಂಗ್ರೆಸ್

ನವದೆಹಲಿ: ಈ ವಾರದ ಆರಂಭದಲ್ಲಿ ನಡೆದ ಉಪ ಚುನಾವಣೆಯ ಮತ ಎಣಿಕೆ ಶನಿವಾರ ಕೊನೆಗೊಂಡಿದ್ದು, ಇಂಡಿಯಾ ಮೈತ್ರಿಕೂಟದ ಪಕ್ಷಗಳು 10 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ ಎರಡು ಸ್ಥಾನ ಗಳಿಸಿದ್ದು, ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಪಂಜಾಬ್(1), ಹಿಮಾಚಲ ಪ್ರದೇಶ(3), ಉತ್ತರಾಖಂಡ(2), ಪಶ್ಚಿಮ ಬಂಗಾಳ(4), ಮಧ್ಯಪ್ರದೇಶ(1), ಬಿಹಾರ(1) ಮತ್ತು ತಮಿಳುನಾಡು(1) ರಾಜ್ಯಗಳಲ್ಲಿ 13 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಉಪಚುನಾವಣೆ ನಡೆದಿದೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಇಂಡಿಯಾ ಮೈತ್ರಿಕೂಟದ ಪಕ್ಷಗಳಲ್ಲಿ ಕಾಂಗ್ರೆಸ್, ಟಿಎಂಸಿ, ಎಎಪಿ ಮತ್ತು ಡಿಎಂಕೆ ಸೇರಿವೆ.

 

ಆಡಳಿತಾರೂಢ ಆಮ್ ಆದ್ಮಿ ಪಕ್ಷದ(ಎಎಪಿ) ಮೊಹಿಂದರ್ ಭಗತ್ ಅವರು ಬಿಜೆಪಿಯ ಶೀತಲ್ ಅಂಗುರಾಲ್ ಅವರನ್ನು ಸೋಲಿಸುವ ಮೂಲಕ ಪಂಜಾಬ್‌ನಲ್ಲಿ ವಿಜಯಶಾಲಿಯಾಗಿದ್ದಾರೆ. ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಣ್ಣಿಯುರ್ ಶಿವ ಅವರು ಪಿಎಂಕೆಯ ಅನ್ಬುಮಣಿ ಸಿ. ಅವರನ್ನು ಸೋಲಿಸಿದರು. ಪಶ್ಚಿಮ ಬಂಗಾಳದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಗಂಜ್, ಬಗ್ಡಾ, ಮಾಣಿಕ್ತಾಲಾ ಮತ್ತು ರಣಘಾಟ್ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ತೃಣಮೂಲ ಕಾಂಗ್ರೆಸ್ ವಶಪಡಿಸಿಕೊಂಡಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕಮಲೇಶ್ ಠಾಕೂರ್ ಅವರು ಬಿಜೆಪಿಯ ಹೋಶಿಯಾರ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ನಲಗಢದಲ್ಲಿ ಬಿಜೆಪಿಯ ಕೆ.ಎಲ್. ಠಾಕೂರ್ ವಿರುದ್ಧ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಗೆಲುವು ಸಾಧಿಸಿದ್ದಾರೆ. ಬಿಜೆಪಿಯು ಹಮೀರ್‌ಪುರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಆಶಿಶ್ ಶರ್ಮಾ ಕಾಂಗ್ರೆಸ್‌ನ ಪುಷ್ಪಿಂದರ್ ವರ್ಮಾ ಅವರನ್ನು ಸೋಲಿಸುವುದರೊಂದಿಗೆ ಗೆದ್ದಿದೆ.

ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್ ಉಪಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿಗಳಾದ ಲಖ್ಪತ್ ಸಿಂಗ್ ಬುಟೋಲಾ ಮತ್ತು ಖಾಜಿ ನಿಜಾಮುದ್ದೀನ್ ಕೂಡ ಗೆಲುವು ಸಾಧಿಸಿದ್ದಾರೆ.

ಮಧ್ಯಪ್ರದೇಶದ ಅಮರವಾರದಲ್ಲಿ ಬಿಜೆಪಿಯ ಕಮಲೇಶ್ ಪ್ರತಾಪ್ ಶಾಹಿ ಅವರು ಕಾಂಗ್ರೆಸ್‌ನ ಧೀರನ್ ಶಾ ಇನ್ವತಿ ಅವರನ್ನು ಸೋಲಿಸಿದ್ದಾರೆ. ಬಿಹಾರದ ರುಪೌಲಿಯಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಅವರು ಜೆಡಿಯುನ ಕಲಾಧರ್ ಪ್ರಸಾದ್ ಮಂಡಲ್ ಅವರನ್ನು ಸೋಲಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...