22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಮೆರಿಕದ ಪರ್ವತಾರೋಹಿ ವಿಲಿಯಂ ಸ್ಟಾಂಪ್‌ಫ್ಲ್ ದೇಹ ಈಗ ಪತ್ತೆಯಾಗಿದೆ. ಹವಾಮಾನ ಬದಲಾವಣೆಯಿಂದ ಹಿಮ ಕರಗಿದ್ದು, ಈಗ ಅವರ ದೇಹ ಸಿಕ್ಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 59 ವರ್ಷದ ಸ್ಟಾಂಪ್‌ಫ್ಲ್ ಜೂನ್ 2002 ರಲ್ಲಿ ನಾಪತ್ತೆಯಾಗಿದ್ದರು.
ಮೌಂಟ್ ಹುವಾಸ್ಕರಾನ್‌ನಲ್ಲಿ ಕ್ಲೈಂಬಿಂಗ್ ತಂಡದ ಜೊತೆ ಹೋಗಿದ್ದ ಸ್ಟಾಂಪ್‌ಫ್ಲ್, 22,000 ಅಡಿಗಿಂತ ಕೆಳಗೆ ಹೂತು ಹೋಗಿದ್ದರು. ಆಗ ರಕ್ಷಣಾ ಪಡೆ ಅವರ ಹುಡುಕಾಟ ನಡೆಸಿ ವಿಫಲವಾಗಿತ್ತು.
ಈಗ ಆಂಡಿಸ್‌ನ ಕಾರ್ಡಿಲ್ಲೆರಾ ಬ್ಲಾಂಕಾ ಶ್ರೇಣಿಯಲ್ಲಿ ಹಿಮ ಕರಗಿದ್ದು, ಸ್ಟಾಂಪ್‌ಫ್ಲ್ ಶವ ಸಿಕ್ಕಿದೆ. ಹಿಮಪಾತದಡಿ ಅವರ ದೇಹವಿದ್ದ ಕಾರಣ, ಶವಕ್ಕೆ ಯಾವುದೇ ಹಾನಿಯಾಗಿಲ್ಲ. ದೇಹ, ಬಟ್ಟೆ, ಬೂಟು ಎಲ್ಲವೂ ಹಾಗೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಗೇಜ್ ನಲ್ಲಿದ್ದ ಪಾಸ್ ಪೋರ್ಟ್ ನೋಡಿ ಅದು ಸ್ಟಾಂಪ್‌ಫ್ಲ್ ಮೃತದೇಹ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಈಶಾನ್ಯ ಪೆರುವಿನ ಪರ್ವತಗಳು, ಹುವಾಸ್ಕರಾನ್ ಮತ್ತು ಕೈಶಾನ್‌ನಂತಹ ಶಿಖರಗಳು ಪ್ರಪಂಚದಾದ್ಯಂತದ ಪರ್ವತಾರೋಹಿಗಳಿಗೆ ಜನಪ್ರಿಯವಾಗಿವೆ. ಮೇ ತಿಂಗಳಲ್ಲಿ ಕಣ್ಮರೆಯಾದ ಇಸ್ರೇಲಿ ಪರ್ವತಾರೋಹಿಯೊಬ್ಬನ ಶವ ಒಂದು ತಿಂಗಳ ನಂತರ ಪತ್ತೆಯಾಗಿತ್ತು.