ಮುಂಬೈನ ಮಹಿಳೆಯೊಬ್ಬಳು ತನ್ನ ಸಾಕು ನಾಯಿಗೆ ದುಬಾರಿ ಉಡುಗೊರೆ ನೀಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆ ನಾಯಿಗೆ ನೀಡುವ ಮೂಲಕ, ನಾಯಿ ಮೇಲಿರುವ ತನ್ನ ಪ್ರೀತಿಯನ್ನು ಪ್ರದರ್ಶಿಸಿದ್ದಾಳೆ.
ಜಗತ್ತಿನಲ್ಲಿ ಸಾಕು ಪ್ರಾಣಿಗಳನ್ನು ಮನುಷ್ಯರಿಗಿಂತ ಹೆಚ್ಚು ಪ್ರೀತಿಸುವ ಜನರಿದ್ದಾರೆ. ಅದ್ರಲ್ಲೂ ಪ್ರಾಮಾಣಿಕ ನಾಯಿಗೆ ಹೆಚ್ಚು ಬೆಲೆ. ನಾಯಿಯನ್ನು ಸಾಕುವ ಜನರು, ಮನೆ ಸದಸ್ಯನಂತೆ ಅದನ್ನು ನೋಡಿಕೊಳ್ತಾರೆ. ಆಹಾರ, ಆರೋಗ್ಯದ ಬಗ್ಗೆ ಮಾತ್ರವಲ್ಲ ಐಷಾರಾಮಿ ಬಗ್ಗೆಯೂ ಹೆಚ್ಚು ಆದ್ಯತೆ ನೀಡ್ತಾರೆ. ಅದಕ್ಕೆ ಈಗ ಸರಿತಾ ಕೂಡ ಸಾಕ್ಷಿ. ತನ್ನ ನಾಯಿಗೆ ದುಬಾರಿ ಉಡುಗೊರೆ ನೀಡುವ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ.
ಚೆಂಬೂರಿನ ಅನಿಲ್ ಜ್ಯುವೆಲರ್ಸ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯ ಪ್ರೀತಿಯ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ ಸರಿತಾ ಸಲ್ಡಾನ್ಹಾ ತನ್ನ ನಾಯಿ ಟೈಗರ್ ಕೊರಳಿಗೆ ದಪ್ಪದಾದ ಚೈನ್ ಹಾಕ್ತಿದ್ದಾರೆ. ಸಲ್ಡಾನ್ಹಾ ತನ್ನ ಪ್ರೀತಿಯ ನಾಯಿ ಟೈಗರ್‌ನ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಅನಿಲ್ ಜ್ಯುವೆಲರ್ಸ್‌ಗೆ ಭೇಟಿ ನೀಡಿ, ಅವರ ಸ್ನೇಹಿತ ಟೈಗರ್‌ಗಾಗಿ ಅದ್ಭುತವಾದ ಸರವನ್ನು ಆಯ್ಕೆ ಮಾಡಿದರು ಎಂದು ಇನ್ಸ್ಟಾ ಪೋಸ್ಟ್ ನಲ್ಲಿ ಬರೆಯಲಾಗಿದೆ. ನಾಯಿಗೆ ಹಾಕಿರುವ ಈ ಚಿನ್ನದ ಸರ 35 ಗ್ರಾಂ ಇದೆ. ಅದ್ರ ಬೆಲೆ 2.5 ಲಕ್ಷ ರೂಪಾಯಿ.
ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು, ನಾಯಿಯಲ್ಲೂ ದೇವರಿದ್ದಾನೆ ಎಂದಿದ್ದಾರೆ. ನಾಯಿಯನ್ನು ಜ್ಯುವೆಲರಿ ಶಾಪ್ ಗೆ ಬಿಟ್ಟಿದ್ದೇ ವಿಶೇಷ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾಯಿಗೆ ಇಂಥ ಮಾಲಿಕರು ಸಿಕ್ಕಿದ್ದು ಅದೃಷ್ಟ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.