ಮಂಡ್ಯ: ಸಿಎಂ ಬದಲಾವಣೆ ವಿಚಾರವಾಗಿ ಮಠಾಧೀಶರು ನೀಡುತ್ತಿರುವ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಗರಂ ಆಗಿದ್ದು, ಮಠಾಧೀಶರು ಶೋಷಿತರ ಧ್ವನಿಯಾಗಬೇಕು ಹೊರತು ಜಾತಿಯ ಧ್ವನಿಯಾಗಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ನೇರವಾಗಿ ಪಕ್ಷ ಆಯ್ಕೆ ಮಾಡಿಲ್ಲ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಅವರನ್ನು ಸಿಎಂ ಮಾಡಿದ್ದಾರೆ. ಈಗಲೂ ನಮ್ಮ ಪಕ್ಷ ಶಾಸಕರ ಬಹುಮತದ ಅಭಿಪ್ರಾಯಕ್ಕೆ ಬದ್ಧವಾಗಿದೆ ಎಂದಿದ್ದಾರೆ.
ಯಾರನ್ನೋ ಓಲೈಕೆ ಮಾಡಲು, ಹೊಗಳಿಕೆಗಾಗಿ ಸಿಎಂ ಬದಲಾವಣೆ ವಿಚಾರ ಮಾತನಾಡಬಾರದು. ಮೊದಲ ಬಾರಿ ಆಯ್ಕೆಯಾಗಿ ಬಂದ ಶಾಸಕರು ಬಹಳ ಹಾರಾಡುತ್ತಿದ್ದಾರೆ. ಈ ವಿಚಾರವನ್ನು ಬಹಿರಂಗವಾಗಿ ಮಾತನಾಡದೇ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಪಕ್ಷದ ಭವಿಷ್ಯ, ಸಮಯ ಸಂದರ್ಭ ನೋಡಿ ಮಾತನಾಡಬೇಕು ಎಂದು ಹೇಳಿದರು.
ಇದೇ ವೇಳೆ ಮಂಡ್ಯದಲ್ಲಿ ಅತಿ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷ ಕಟ್ಟಿದವನು ನಾನು. ನನಗೆ ಅನ್ಯಾಯವಾಯ್ತು ಅಂತಾ ಬೀದಿಯಲ್ಲಿ ಮಾತನಾಡಲು ಆಗುತ್ತಾ? ಬೇರೆ ಸಚಿವರಿಗಿಂತ ಹೆಚ್ಚು ಸೀನಿಯಾರಿಟಿ, ಅರ್ಹತೆ ಇದೆ. ಆದರೆ ಪಕ್ಷದ ತೀರ್ಮಾನಕ್ಕೆ ತಲೆಬಾಗಬೇಕು ಎಂದು ಹೇಳಿದ್ದಾರೆ.