ರಾಜಸ್ಥಾನದ ಸಿಕರ್‌ನಲ್ಲಿ 9 ವರ್ಷದ ಶಾಲಾ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಶಾಲೆಯಲ್ಲಿ ಊಟದ ಡಬ್ಬಿ ತೆರೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದಂತಾದ ಆದರ್ಶ್ ವಿದ್ಯಾ ಮಂದಿರದ 4ನೇ ತರಗತಿಯ ವಿದ್ಯಾರ್ಥಿನಿ ಪ್ರಾಚಿ ಕುಮಾವತ್ ಮಧ್ಯಾಹ್ನ ಸಾವನ್ನಪ್ಪಿದ್ದಾಳೆ. ಶಾಲಾ ಪ್ರಾಂಶುಪಾಲ ನಂದ ಕಿಶೋರ್, “ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿತು… ಅವಳು ತನ್ನ ಊಟದ ಡಬ್ಬಿಯನ್ನು ಕೆಳಗೆ ಹಾಕಿ ಕುಸಿದುಬಿದ್ದಳು. ನಾವೆಲ್ಲರೂ ಆ ಸಮಯದಲ್ಲಿ ಶಾಲಾ ಆವರಣದಲ್ಲಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು” ಎಂದು ಹೇಳಿದ್ದಾರೆ.
“ವಿದ್ಯಾರ್ಥಿಗಳು ಮೂರ್ಛೆ ಹೋಗುವುದು ಹೊಸದೇನಲ್ಲ ಮತ್ತು ಮಕ್ಕಳಿಗೆ ನೀರು ಕೊಟ್ಟರೆ ಸಾಮಾನ್ಯವಾಗಿ ಚೇತರಿಸಿಕೊಳ್ಳುತ್ತಾರೆ. ಆದರೆ, ಅವಳ ಪರಿಸ್ಥಿತಿ ಭಿನ್ನವಾಗಿತ್ತು. ಹಾಗಾಗಿ, ನಾವು ಆಕೆಯನ್ನು ಸುಮಾರು 500 ಮೀಟರ್ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ದೆವು. ಅಲ್ಲಿ, ವೈದ್ಯಕೀಯ ಸಿಬ್ಬಂದಿ ಆಕೆಯನ್ನು ನೋಡಿಕೊಂಡಿದ್ದು, ಆಕೆ ಆರಂಭದಲ್ಲಿ ಚೇತರಿಸಿಕೊಂಡಂತೆ ಕಂಡಿತು” ಎಂದು ಕಿಶೋರ್ ಹೇಳಿದ್ದಾರೆ.
ಸಿಎಚ್‌ಸಿ ಸಿಬ್ಬಂದಿ ಆಕೆಯನ್ನು ಸಿಕರ್ ಆಸ್ಪತ್ರೆಗೆ ಕಳುಹಿಸಿದ್ದು, ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದರು. “ಆದರೆ, ಆಕೆಗೆ ಮತ್ತೆ ಹೃದಯಾಘಾತವಾಯಿತು, ಮತ್ತು ಈ ಬಾರಿ ವೈದ್ಯರು ಚುಚ್ಚುಮದ್ದು ನೀಡಿ ಸಾಧ್ಯವಿರುವ ಎಲ್ಲವನ್ನೂ ಮಾಡಿದರೂ ಸುಮಾರು 1:30 ಕ್ಕೆ, ಆಕೆ ನಿಧನರಾಗಿದ್ದಾಳೆ ಎಂದು ನಮಗೆ ತಿಳಿಯಿತು” ಎಂದು ಪ್ರಾಂಶುಪಾಲರು ಹೇಳಿದರು.
ದಂತಾ ಸಿಎಚ್‌ಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಆರ್. ಕೆ. ಜಾಂಗಿದ್, “ಪ್ರಾಥಮಿಕವಾಗಿ, ಮಗು ಹೃದಯಾಘಾತಕ್ಕೆ ಒಳಗಾಗಿತ್ತು. ಅವಳು ಶಾಲೆಯಲ್ಲಿ sudden cardiac arrest ಗೆ ಒಳಗಾಗಿದ್ದಳು” ಎಂದು ಹೇಳಿದರು. ಮರಣೋತ್ತರ ಪರೀಕ್ಷೆ ನಡೆಸಿಲ್ಲವಾದರೂ, ಸಿಎಚ್‌ಸಿ ವೈದ್ಯರು ಇದು ಹೃದಯಾಘಾತ ಎಂದು ತೀರ್ಮಾನಿಸಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡರು, ಇದರಿಂದ ಆಕೆಯ ಸ್ಥಿತಿ ಸಂಕ್ಷಿಪ್ತವಾಗಿ ಸುಧಾರಿಸಿತು ಎಂದು ವೈದ್ಯರು ಹೇಳಿದರು. “ನಾವು ಆಕೆಗೆ ಆಮ್ಲಜನಕ ನೀಡಿ ಕಾರ್ಡಿಯಾಕ್ ರಿಸಸಿಟೇಶನ್ ಮಾಡಿದೆವು. ನಂತರ ನಾವು ಆಕೆಯನ್ನು ಸಿಕರ್‌ನ ಶ್ರೀ ಕಲ್ಯಾಣ್ (ಸರ್ಕಾರಿ) ಆಸ್ಪತ್ರೆಗೆ ಕಳುಹಿಸಿದೆವು ಆದರೆ ಆಸ್ಪತ್ರೆ ತಲುಪುವ ಮೊದಲೇ ಆಕೆ ನಿಧನರಾದರು.” ಎಂದಿದ್ದಾರೆ.
ಬಾಲಕಿಗೆ ಜನ್ಮಜಾತ ಹೃದಯ ಕಾಯಿಲೆ ಅಥವಾ ಹೃದ್ರೋಗದ ಇತಿಹಾಸವಿರಲಿಲ್ಲ ಎಂದು ಡಾ. ಜಾಂಗಿದ್ ಹೇಳಿದ್ದಾರೆ. ಪ್ರಾಚಿ ಅವರ ತಂದೆ ಗುಜರಾತ್‌ನಲ್ಲಿ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಾಂಶುಪಾಲ ಕಿಶೋರ್ ತಿಳಿಸಿದ್ದಾರೆ.