ಶಿವಮೊಗ್ಗ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ಉದ್ದೇಶಕ್ಕಾಗಿ 8 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುವುದು.
ಹಾವೇರಿ ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಹಾಗೂ ಗದಗ ಜಿಲ್ಲೆಗೆ ಬರುವ ಗದಗ, ಲಕ್ಷ್ಮೀಶ್ವರ, ಮುಂಡರಗಿ ಮತ್ತು ಶಿರಹಟ್ಟಿ ತಾಲ್ಲೂಕುಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕಾಗಿ ದಿನಾಂಕ 05-04-2025 ರಿಂದ 08-04-2025 ರವರೆಗೆ ಪ್ರತಿ ನಿತ್ಯ 2000 ಕ್ಯೂಸೆಕ್ ನಂತೆ ಒಟ್ಟು 4 ದಿನಗಳು 8000 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುವುದು.
ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ರೈತರುಗಳು ಜಾನುವಾರು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುನ್ನು ನಿಷೇಧಿಸಲಾಗಿದೆ. ನದಿಯಿಂದ ಅನಧಿಕೃತವಾಗಿ ವಿದ್ಯುತ್ ಪಂಪ್/ಡೀಸೆಲ್ ಪಂಪ್‌ಸೆಟ್ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ನದಿ ಪಾತ್ರದಿಂದ ಸಾರ್ವಜನಿಕರು ಮತ್ತು ರೈತರು ಸುರಕ್ಷಿತ ಸ್ಥಳಗಳಿಗೆ ತೆರಳಲು ಈ ಮೂಲಕ ಸೂಚಿಸಲಾಗಿದೆ. ಭದ್ರಾ ನದಿ ಪಾತ್ರದ ರೈತರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಲು ಕೋರಿದೆ.
