BREAKING : 79 ನೇ ‘ಸ್ವಾತಂತ್ರ್ಯ ದಿನಾಚರಣೆ’ : ಮಾಣಿಕ್ ಷಾ ಮೈದಾನದಲ್ಲಿ ‘CM ಸಿದ್ದರಾಮಯ್ಯ’ ಭಾಷಣದ ಮುಖ್ಯಾಂಶಗಳು ಹೀಗಿದೆ.!

ಬೆಂಗಳೂರು : 79 ನೇ  ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ರಾಜ್ಯದ ಜನರನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ, ದೇಶವಾಸಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯ ದಿನದ ಶುಭ ಹಾರೈಸಿದರು.

ಸಿಎಂ ಭಾಷಣದ ಮುಖ್ಯಾಂಶಗಳು.!

ಆರೋಗ್ಯ ಇಲಾಖೆಯಲ್ಲಿ ನಮ್ಮ ಸರ್ಕಾರವು ಹಲವಾರು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಖ್ಯವಾಗಿ, ಪುನೀತ್ ರಾಜುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಕ್ಯಾನ್ಸ‌ರ್ ರೋಗಿಗಳ ಪ್ರಯಾಣ ಮತ್ತು ಚಿಕಿತ್ಸೆಯ ಹೊರೆ ಕಡಿಮೆ ಮಾಡಲು ಹಬ್ ಮತ್ತು ಸ್ಕೋಪ್ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸ‌ರ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ನಾವು ತೆಗೆದುಕೊಂಡ ಕ್ರಮಗಳಿಂದಾಗಿ 2025ನೇ ಸಾಲಿನಲ್ಲಿ ತಾಯಂದಿರ ಮರಣ ಪ್ರಮಾಣ ಶೇ.26 ರಷ್ಟು ಕಡಿಮೆ ಆಗಿದೆ. ಪ್ರಮುಖ 14 ಅಸಾಂಕ್ರಾಮಿಕ ರೋಗಗಳಿಗೆ ಮನೆ ಬಾಗಿಲಲ್ಲೆ ತಪಾಸಣೆ, ಚಿಕಿತ್ಸೆ ಮತ್ತು ಅನುಸರಣೆ ಸೇವೆಗಳನ್ನು ನೀಡುವ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿದ್ದೇವೆ.

ಆಂಬ್ಯುಲೆನ್ಸ್ ಸೇವೆಗಳನ್ನು ರಾಜ್ಯಾದ್ಯಂತ ಕೇಂದ್ರೀಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಲ್ಲಿ ನಿರ್ವಹಿಸುವಂತೆ ಮಾಡಲು ತೀರ್ಮಾನಿಸಿದ್ದೇವೆ. ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ಕಲಬೆರಕೆ ಮತ್ತು ಜನರ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಆಹಾರಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಅವುಗಳನ್ನು ನಿಷೇಧಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ.

ನಮ್ಮ ಸರ್ಕಾರವು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದೇವೆ. ಇದುವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ 12,000 ಕಿ.ಮೀ.ಗಳಿಗೂ ಹೆಚ್ಚಿನ ರಸ್ತೆಗಳನ್ನು ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿ ಮತ್ತು ನವೀಕರಣ ಮಾಡಿದ್ದೇವೆ. ಈ ವರ್ಷದ ಬಜೆಟ್ನಲ್ಲಿ ಆಡಳಿತ ಇಲಾಖೆಗಳ ವತಿಯಿಂದ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳನ್ನು ಒದಗಿಸಿರುವುದಲ್ಲದೆ ರಸ್ತೆ, ಸೇತುವೆ ಮು೦ತಾದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ‘ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ’ಯೋಜನೆಯನ್ನು ಪ್ರಾರಂಭಿಸಿ ಈ ವರ್ಷ 8,000 ಕೋಟಿ ರೂ.ಗಳನ್ನು ನೀಡುತ್ತಿದ್ದೇವೆ.

ಕರಾವಳಿ, ಮಲೆನಾಡು ಪ್ರದೇಶಗಳ ಸಂಪರ್ಕ ರಹಿತ ಜನವಸತಿ ಪ್ರದೇಶಗಳ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ರೂ.44.15 ಕೋಟಿ ಅಂದಾಜು ಮೊತ್ತದಲ್ಲಿ ಕಳೆದ ಎರಡು ವರ್ಷದಲ್ಲಿ 208 ಕಾಲುಸಂಕಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. 2025-26ನೇ ಸಾಲಿನಲ್ಲಿ 184 ಕಾಲುಸಂಕಗಳ ನಿರ್ಮಾಣದ ಕ್ರಿಯಾಯೋಜನೆಗಳಿಗೆ 31 ಕೋಟಿ ರೂ.ಮೊತ್ತದಲ್ಲಿ ಅನುಮೋದನೆ ನೀಡಲಾಗಿದೆ.

ಉದ್ಯೋಗ ಸೃಜನೆಯ ದೃಷ್ಟಿಯಿಂದ ನಮ್ಮ ಸರ್ಕಾರ ಪೂರಕ ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಫೆಬ್ರವರಿ-2025ರ ಮಾಹೆಯಲ್ಲಿ ನಡೆಸಿದ “ಇನ್ವೆಸ್ಟ್ ಕರ್ನಾಟಕ-2025″ರಲ್ಲಿ ಒಟ್ಟು 3,250 ಉದ್ದಿಮೆದಾರರು ಭಾಗವಹಿಸಿದ್ದು, ಒಟ್ಟು 98 ಕಂಪನಿಗಳೊಂದಿಗೆ 6,23,970 ಕೋಟಿ ರೂ.ಗಳ ಹೂಡಿಕೆಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಹಾಗೂ 4,03,533 ಕೋಟಿ ರೂ. ಹೂಡಿಕೆ ಮಾಡಲು 1,101 ಕಂಪನಿಗಳು ಸಂಬಂಧಿಸಿದ ಸಮಿತಿಗಳಿಂದ ಅನುಮೋದನೆ ಪಡೆದಿರುತ್ತಾರೆ. ಇವುಗಳಿಂದ ಅಂದಾಜು 6 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆಯಿದೆ.

ಕರ್ನಾಟಕ ರಾಜ್ಯವು 2023-24ನೇ ಸಾಲಿನಲ್ಲಿ 54,427 ಕೋಟಿ ರೂ. ವಿದೇಶಿ ಹೂಡಿಕೆ ಆಕರ್ಷಿಸಿ, ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, 2024-25ನೇ ಸಾಲಿನಲ್ಲಿ 56,030 ಕೋಟಿ ರೂ. ವಿದೇಶಿ ಹೂಡಿಕೆ ಆರ್ಕಷಿ್ರಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ.

ನಮ್ಮ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ಜೊತೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಸಮಾನವಾಗಿ ನೋಡುತ್ತಿದೆ. ಬಂಡವಾಳ ವೆಚ್ಚಗಳಿಗಾಗಿ ಈ ವರ್ಷ 83,200 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದ್ದೇವೆ. ಬಜೆಟ್ನಲ್ಲಿ ಶೇ.20.1ರಷ್ಟು ಅನುದಾನವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿನಿಯೋಗ ಮಾಡುತ್ತಿರುವ ಪ್ರಮುಖ ರಾಜ್ಯ ನಮ್ಮದಾಗಿದೆ.

ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಸಂಘಗಳಿಗೆ ನಮ್ಮ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಅವರ ಸದ್ದಿಲ್ಲದ ಛಲವನ್ನು ಕಣ್ಣಿಗೆ ಕಾಣುವ ಯಶಸ್ಸನ್ನಾಗಿ ಪರಿವರ್ತನೆ ಮಾಡುತ್ತಿವೆ. ನಾವು ಕ್ರೀಡೆ, ಕಲೆ ಮತ್ತು ವಿಜ್ಞಾನದಲ್ಲಿ ಸಾಧಕರನ್ನು ಗುರುತಿಸುತ್ತಿದ್ದೇವೆ. ಪ್ರತಿಯೊ೦ದು ರೀತಿಯ ಪ್ರತಿಭೆಗೂ ಅದಕ್ಕೆ ಅರ್ಹವಾದ ಗೌರವ ಸಿಗುವಂತೆ ಮಾಡುತ್ತಿದ್ದೇವೆ.

ರೈತನ ಮಗ ವಿಜ್ಞಾನಿಯಾಗಬೇಕು, ನೇಕಾರನ ಮಗಳು ಉದ್ಯಮಿಯಾಗಬೇಕು ಮತ್ತು ಪ್ರತಿಯೊಂದು ಮಗುವಿಗೂ ತನ್ನ ಭವಿಷ್ಯ ತನ್ನ ಕೈಯಲ್ಲಿದೆ ಎಂಬ ಭಾವನೆ ಮೂಡುವಂತಹ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ.

ಅಭಿವೃದ್ಧಿಯ ಉತ್ತುಂಗ ತಲುಪಿ, ಸಮಾಜಕ್ಕೆ ಮರಳಿ ಕೊಡುಗೆ ನೀಡುವುದೇ ಅತ್ಯುನ್ನತ ಸ್ವಾತಂತ್ರ್ಯ. ಕರ್ನಾಟಕ ರಾಜ್ಯ ಈಗಾಗಲೇ ಭಾರತದ ಐಟಿ ರಾಜಧಾನಿಯಾಗಿದೆ ಮತ್ತು ಈಗ ನಾವು ಜಗತ್ತಿನ ‘ನಾವೀನ್ಯತಾ ರಾಜಧಾನಿ’ ಯಾಗುವತ್ತ ಹೆಜ್ಜೆ ಇರಿಸಿದ್ದೇವೆ.

ನಾವು ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ನವೀಕರಿಸಬಹುದಾದ ಇಂಧನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದೇವೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಕರ್ನಾಟಕದಲ್ಲಿದೆ. ನಮ್ಮ ಕರ್ನಾಟಕ ಕ್ವಾಂಟಮ್ ಮಿಷನ್’ ವಿಜ್ಞಾನದ ಭವಿಷ್ಯವನ್ನು ರೂಪಿಸಲಿದೆ.

ನಾವು ಕೇವಲ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಜನರ ಜೀವನವನ್ನು ಬದಲಾಯಿಸುವಂತಹ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೊಸತನಗಳನ್ನು ಸೃಷ್ಟಿಸುತ್ತಿದ್ದೇವೆ. ನಮ್ಮ ಈ ಆಲೋಚನೆಗಳು ಗಡಿಯಾಚೆಗೂ ತಲುಪಿವೆ.

ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಸರ್ಕಾರವು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಆ ಸಮಿತಿಯು ವರದಿಯನ್ನು ನೀಡಿದ ಕೂಡಲೆ ಅದನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ನಾವೆಲ್ಲರೂ ಗಮನಿಸಿರುವ ಹಾಗೆ ನಮ್ಮ ಹೊಸ ತಲೆಮಾರು ಮೊಬೈಲ್ ಫೋನು, ಇಂಟರ್ನೆಟ್ಟು ಮು೦ತಾದವುಗಳ ಭರಾಟೆಯಲ್ಲಿ ವಿಪರೀತ ತಲ್ಲಣಗಳನ್ನು ಎದುರಿಸುತ್ತಿದೆ. ಖಿನ್ನತೆ, ಆತಂಕ, ವಿನಾಕಾರಣ ಸಿಟ್ಟು, ದ್ವೇಷ ಮುಂತಾದ ಭಾವನೆಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದೆ. ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಹೊಸ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಮೊಬೈಲ್ ಬಿಡಿ – ಪುಸ್ತಕ ಹಿಡಿ ಮತ್ತು ಓದು ಕರ್ನಾಟಕ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೇವೆ.

ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವೆಂದು ಘೋಷಿಸಿದ್ದೇವೆ. ಹಾಗೆಯೇ ನಾವೆಲ್ಲರೂ ನಮ್ಮ ಹೆಮ್ಮೆಯ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಘೋಷಿಸಬೇಕಾಗಿದೆ. ಈ ಹೋರಾಟದಲ್ಲಿ ಪ್ರತಿ ಪ್ರಜೆಯೂ ಯೋಧರಂತೆ ಕೆಲಸ ಮಾಡಬೇಕಾಗಿದೆ. ಸರ್ಕಾರವು ಈಗಾಗಲೇ ಈ ವಿಚಾರದಲ್ಲಿ ಸಕಲ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ.

ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ.

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read