ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ ವಾಹನ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಬಳ್ಳಾರಿಯ ಬಾಪೂಜಿನಗರದಲ್ಲಿ ನಡೆದಿದೆ.
ಶೈಲಜಾ, ಸಮರ ದಂಪತಿಯ ಪುತ್ರ ವಿಕ್ಕಿ(3) ಮೃತಪಟ್ಟ ಮಗು. ಬೆಳಿಗ್ಗೆ ಬಾಪೂಜಿನಗರದಲ್ಲಿ ಕಸ ಸಂಗ್ರಹಿಸಲು ಪಾಲಿಕೆ ವಾಹನ ಬಂದಿದ್ದು, ರಸ್ತೆ ಬದಿ ಆಟವಾಡುತ್ತಿದ್ದ ವಿಕ್ಕಿಯ ತಲೆ ಮೇಲೆ ಹರಿದಿದೆ. ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಮಗು ಮೃತಪಟ್ಟಿದೆ.
ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾಲಿಕೆ ಮೇಯರ್ ನಂದೀಶ್, ಬಳ್ಳಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ವಾಹನ ಚಾಲಕನ ಅತಿ ವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದೆ.