ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 24*7 ತಜ್ಞ ವೈದ್ಯರ ಸೇವೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕನಿಷ್ಠ ಸಂಖ್ಯೆಗಿಂತ ಕಡಿಮೆ ಹೆರಿಗೆಗಳು ಆಗುವ ಆಸ್ಪತ್ರೆಗಳ ವೈದ್ಯರನ್ನು ಹೆಚ್ಚು ಹೆರಿಗೆಗಳಾಗುವ ಆಸ್ಪತ್ರೆಗಳಿಗೆ ಹೊಂದಾಣಿಕೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ- ಮಗು ಮರಣ ಶೂನ್ಯಕ್ಕಿಳಿಸುವುದು ಸರ್ಕಾರದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಇಬ್ಬರು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಒಬ್ಬ ರೇಡಿಯಾಲಜಿಸ್ಟ್ ಲಭ್ಯವಿದ್ದು, ದಿನದ 24 ಗಂಟೆಯೂ ಹೆರಿಗೆ ಸೌಲಭ್ಯ ಸಿಗುವಂತೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರದ ತಜ್ಞ ವೈದ್ಯರನ್ನು ಹಾಗೂ ಇಬ್ಬರು ಸ್ಟಾಫ್ ನರ್ಸ್ ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಮರು ಹೊಂದಾಣಿಕೆ ಮಾಡಲಾಗುವುದು. ಕನಿಷ್ಠ 30ಕ್ಕಿಂತ ಹೆಚ್ಚು ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞ ವೈದ್ಯರನ್ನು ಮುಟ್ಟುವುದಿಲ್ಲ. ಅಲ್ಲಿ ತಲಾ ಒಬ್ಬ ಸ್ತ್ರೀರೋಗ ತಜ್ಞ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ತಜ್ಞ ವೈದ್ಯರನ್ನು ಸ್ಥಳಾಂತರಿಸಿದ ನಂತರ ಆ ಸ್ಥಳಕ್ಕೆ ಇಬ್ಬರು ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗುವುದು. ಮಕ್ಕಳ ತಜ್ಞರನ್ನು ಮುಂದುವರಿಸಲಾಗುವುದು. ಸಹಜ ಹೆರಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮಾಡಿಸಬಹುದಾಗಿದೆ. ಸಿಸೇರಿಯನ್ ಪ್ರಕರಣಗಳನ್ನು ಮಾತ್ರ ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ 15 ಜಿಲ್ಲಾ ಆಸ್ಪತ್ರೆಗಳಿಗೆ 125 ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞ ಕೊರತೆ ನೀಗಿಸಲು ನರರೋಗ, ಹೃದ್ರೋಗ, ಮೂತ್ರಪಿಂಡ ಶಾಸ್ತ್ರಜ್ಞ, ಅಂಕಾಲಜಿಸ್ಟ್, ಇತರೆ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.
