ಬೆಂಗಳೂರು: ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಅಪಾರ್ಟ್ಮೆಂಟ್, ವಾಣಿಜ್ಯ ಸಂಕೀರ್ಣ, ಕೈಗಾರಿಕೆ ಸೇರಿದಂತೆ ಎಲ್ಲಾ ಬಹುಮಹಡಿ ಕಟ್ಟಡಗಳಿಗೆ ಆಸ್ತಿ ತೆರಿಗೆಯೊಂದಿಗೆ ಶೇಕಡ 1ರಷ್ಟು ಅಗ್ನಿಶಾಮಕ ಸೆಸ್ ವಿಧಿಸಲು ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.
ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿದುರಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಳ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಹೊಸದಾಗಿ ನಿರ್ಮಾಣವಾಗುವ ಎಲ್ಲಾ ಬಹು ಮಹಡಿ ಕಟ್ಟಡಗಳಿಗೆ ಈ ನಿರ್ಧಾರ ಅನ್ವಯವಾಗಲಿದ್ದು, ಆಸ್ತಿ ತೆರಿಗೆಯೊಂದಿಗೆ ಶೇಕಡ 1 ರಷ್ಟು ಫೈರ್ ಸೆಸ್(ಅಗ್ನಿಶಾಮಕ ಸೆಸ್ –ಮೇಲ್ತೆರಿಗೆ) ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕ -2025ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಆಗಸ್ಟ್ 11ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ.