ಪೊಲೀಸ್ ಅಧಿಕಾರಿಯ ಕೆಲಸವೇನು ? ಅಪರಾಧಿಗಳನ್ನು ಪತ್ತೆ ಹಚ್ಚುವುದು ಹಾಗೂ ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಆಗಿದೆ. ಆದರೆ, ಕೆಲವೊಮ್ಮೆ ಅವರು ತುಂಬಾ ಕಠೋರವಾಗಿ ಮಾತನಾಡುತ್ತಾರೆ ಮತ್ತು ವರ್ತಿಸುತ್ತಾರೆ ಎಂಬ ಕಾರಣಕ್ಕಾಗಿ ಪೊಲೀಸರನ್ನು ಕಂಡರೆ ಭಯಬೀಳುತ್ತೇವೆ. ಅಲ್ಲದೆ ಪೊಲೀಸರು ಭ್ರಷ್ಟಾಚಾರ ಮತ್ತು ಲಂಚ ಸ್ವೀಕರಿಸುತ್ತಾರೆ ಎಂಬಂತಹ ಮಾತುಗಳಿಂದ ಅವರ ಬಗ್ಗೆ ಋಣಾತ್ಮಕ ಆಲೋಚನೆಯೇ ಬರುತ್ತದೆ.
ಆದರೆ, ಪೊಲೀಸರಲ್ಲೂ ಮಾನವೀಯತೆ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಅವರಲ್ಲಿದೆ. ಇದಕ್ಕೆ ನಿದರ್ಶನ ಎಂಬಂತೆ ಬೀದಿಗಳಲ್ಲಿ ವಾಸಿಸುವ ಒಬ್ಬ ಬಡ ಹುಡುಗನ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಔದಾರ್ಯ ತೋರಿರುವ ಹೃದಯವನ್ನು ಬೆಚ್ಚಗಾಗಿಸುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ್ರೆ ಪೊಲೀಸರ ಬಗ್ಗೆ ನಿಮ್ಮ ಗ್ರಹಿಕೆಯೇ ಬದಲಾಗುತ್ತದೆ.
ಅಭಯ್ ಗಿರಿ ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಸೂರಿಲ್ಲದ ಬಾಲಕನಿಗೆ ನೀರು ನೀಡುತ್ತಿರವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಬಾಟಲಿಯಿಂದ ನೀರು ಕುಡಿದಾದ ಬಳಿಕ ಅಧಿಕಾರಿ ಕೊಟ್ಟ ಮತ್ತೊಂದು ಉಡುಗೊರೆ ಕಂಡು ಬಾಲಕ ಅಚ್ಚರಿಗೊಂಡಿದ್ದಾನೆ. ಬಾಲಕನಿಗೆ ಧರಿಸಲು ಒಂದು ಜೋಡಿ ಚಪ್ಪಲಿಗಳನ್ನು ಅವರು ತಂದಿದ್ದರು.
ಹೌದು, ಬಾಲಕನಿಗೆ ಕುಡಿಯುವ ನೀರು ನೀಡಿದ ಅಧಿಕಾರಿ, ಹೊಸ ಚಪ್ಪಲಿಗಳನ್ನು ನೀಡಿ, ಪ್ಯಾಂಟ್ ಮತ್ತು ಶರ್ಟ್ ಒಳಗೊಂಡ ಹೊಸ ಬಟ್ಟೆಯನ್ನು ಸಹ ಬಾಲಕನಿಗೆ ನೀಡಿದ್ರು. ಪೊಲೀಸ್ ಅಧಿಕಾರಿಯ ಔದಾರ್ಯಕ್ಕೆ ಬಾಲಕ ಅಕ್ಷರಶಃ ಬೆರಗಾಗಿದ್ದಾನೆ. ಬಹಳ ಖುಷಿಯಿಂದಲೇ ನಗುತ್ತಾ, ಆನಂದಭಾಷ್ಪ ಸುರಿಸುತ್ತಾ ಬಾಲಕ, ಪೊಲೀಸ್ ಅಧಿಕಾರಿಯ ಪಾದ ಸ್ಪರ್ಶಿಸಲು ಮುಂದಾದ. ಪಾದ ಸ್ಪರ್ಶಿಸದಂತೆ ಕೈಯಿಂದ ಹಿಡಿದೆತ್ತಿದ ಪೊಲೀಸ್ ಅಧಿಕಾರಿ ಬಾಲಕನಿಗೆ ಆಶೀರ್ವದಿಸಿದ್ರು.
ಈ ನಗು ಹೃದಯವನ್ನು ಗೆಲ್ಲುತ್ತದೆ ಎಂದು ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಧಿಕಾರಿಯ ಔದಾರ್ಯ ಕಂಡ ನೆಟ್ಟಿಗರು ಕೂಡ ಹಾಡಿ ಹೊಗಳಿದ್ರು. ಪ್ರತಿಯೊಬ್ಬ ಪೊಲೀಸ್ ಕೂಡ ಇದೇ ರೀತಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎಂಬಂತಹ ಅನಿಸಿಕೆಗಳನ್ನು ಹಂಚಿಕೊಂಡ್ರು.
https://youtu.be/RKnLlVNslEI