ಸಚಿವ ಸೋಮಣ್ಣ ಆಪ್ತನ ಮನೆ ಮೇಲೆ ಐಟಿ ರೇಡ್….! ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರಿಗೆ ಶಾಕ್ ನೀಡಿದ್ದು, ಕೆಜಿಎಫ್ ಬಾಬು ಸೇರಿದಂತೆ ಹಲವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದನ್ನು ಹೊರತುಪಡಿಸಿ ಸಚಿವ ವಿ. ಸೋಮಣ್ಣ ಅವರ ಆಪ್ತನ ಮನೆ ಮೇಲೆ ಐಟಿ ರೇಡ್ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸಚಿವ ವಿ. ಸೋಮಣ್ಣ ಅವರ ಆಪ್ತ ಬಳಗದಲ್ಲಿರುವ ಚಾಮರಾಜನಗರದ ಪಿ. ವೃಷಭೇಂದ್ರಪ್ಪ ಅವರ ಬೈಕ್ ಶೋ ರೂಮ್ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಇವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದಾರೆ. ಬೈಕ್ ಖರೀದಿಸುವ ಸೋಗಿನಲ್ಲಿ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಬಳಿಕ ಭ್ರಮರಾಂಬ ಬಡಾವಣೆಯಲ್ಲಿರುವ ಅವರ ನಿವಾಸದಲ್ಲೂ ದಾಖಲೆಗಳ ತಪಾಸಣೆ ಮಾಡಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಚಿವ ವಿ. ಸೋಮಣ್ಣ, ಮೈಸೂರಿನ ವರುಣಾ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಪ್ರತಿಷ್ಠಿತ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮಣ್ಣನವರಿಗೆ ಎದುರಾಳಿಯಾಗಿದ್ದಾರೆ. ಚಾಮರಾಜನಗರದಲ್ಲಿ ವೃಷಭೇಂದ್ರಪ್ಪ ಸೇರಿದಂತೆ ಹಲವರು ಸೋಮಣ್ಣನವರ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read