ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಎಂಎಲ್ ಸಿ ರವಿಕುಮಾರ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಹಿನ್ನೆಲೆಯಲ್ಲಿ ವಿಧಾನಸೌಧ ಠಾಣೆಯಲ್ಲಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಎಫ್ಐ ಆರ್ ದಾಖಲಾಗಿತ್ತು. ಬಂಧನ ಭೀತಿಯಲ್ಲಿದ್ದ ರವಿಕುಮಾರ್ ತನ್ನ ವಿರುದ್ಧದ ಎಫ್ ಐ ಆರ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರವಿಕುಮಾರ್ ಅವರನ್ನು ಜುಲೈ 8ರವರೆಗೆ ಬಂಧಿಸುವಂತಿಲ್ಲ. ಅವರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ತಿಳಿಸಿದೆ. ಅಲ್ಲದೇ ರವಿಕುಮಾರ್ ಪ್ರಕರಣ ಸಂಬಂಧ ವಿಚಾರಣೆಗೆ ಸಹಕರಿಸಬೇಕು ಎಂದು ಸೂಚಿಸಿದೆ. ಈ ಮೂಲಕ ರವಿಕುಮಾರ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಮುಂದಿನ ವಿಚಾರಣೆ ಜುಲೈ 8ಕ್ಕೆ ಮುಂದೂಡಿದೆ.