ಬೆಂಗಳೂರು ಮೂಲದ ಸಿಇಒ (CEO) ಅಮಿತ್ ಮಿಶ್ರಾ (Amit Mishra), ಇತ್ತೀಚೆಗೆ ತಮ್ಮ ಭೀಕರ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವವಾಗಿ, ರಕ್ತದೊತ್ತಡ (Blood pressure) 230ಕ್ಕೆ ಏರಿದ ಕಾರಣ ಅವರನ್ನು ತಕ್ಷಣವೇ ಐಸಿಯುಗೆ (ICU) ದಾಖಲಿಸಲಾಯಿತು. ಈ ಆಘಾತಕಾರಿ ಘಟನೆಯ ನಂತರ, ಅವರು ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂಬ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಮಾರ್ಚ್ 29 ರಂದು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ (LinkedIn post) ಅಮಿತ್ ಅವರು ತಮ್ಮ “ಸೋಮಾರಿಯಾದ ಶನಿವಾರ”ವನ್ನು “ಭಯಾನಕ ವಾರಾಂತ್ಯ”ವಾಗಿ ಪರಿವರ್ತಿಸಿದ ಆಘಾತಕಾರಿ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಅಮಿತ್ ಮಿಶ್ರಾ “ಶನಿವಾರ, ಲ್ಯಾಪ್‌ಟಾಪ್‌ನಲ್ಲಿ ನಿರಾಳವಾಗಿ ಕೆಲಸ ಮಾಡುತ್ತಿದ್ದೆ, ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಪ್ರಾರಂಭವಾಯಿತು, ಅದು ನಿಲ್ಲಲಿಲ್ಲ, ವಾಶ್‌ಬೇಸಿನ್ ಕೆಂಪಾಯಿತು, ದಪ್ಪ ಹತ್ತಿ ಬಟ್ಟೆ ರಕ್ತದಲ್ಲಿ ತೋಯ್ದಿತ್ತು, ಕೋಮಾಕ್ಕೆ ಹೋಗುವ ಭಯವಿತ್ತು, ಐಸಿಯುಗೆ ದಾಖಲಾದೆ. ಅದು ನನ್ನ ಭಯಾನಕ ವಾರಾಂತ್ಯ!! ನಾನು ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗುವ ಹೊತ್ತಿಗೆ ಸಾಕಷ್ಟು ರಕ್ತವನ್ನು ಕಳೆದುಕೊಂಡಿದ್ದೆ. ತುರ್ತು ಚಿಕಿತ್ಸಾ ತಂಡವು 20 ನಿಮಿಷಗಳ ಕಾಲ ಹೆಣಗಾಡಿ ರಕ್ತಸ್ರಾವವನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಆದರೆ ನಿಜವಾದ ಆಘಾತ ಕಾದಿತ್ತು – ನನ್ನ ರಕ್ತದೊತ್ತಡ 230 ತಲುಪಿತ್ತು. ತಲೆನೋವು ಇರಲಿಲ್ಲ, ತಲೆತಿರುಗುವಿಕೆ ಇರಲಿಲ್ಲ, ಯಾವುದೇ ಮುನ್ಸೂಚನೆ ಇರಲಿಲ್ಲ, ರಕ್ತದೊತ್ತಡದ ಹಿಂದಿನ ಇತಿಹಾಸವೂ ಇರಲಿಲ್ಲ, ಇದು ಸಂಪೂರ್ಣವಾಗಿ ಅನಿರೀಕ್ಷಿತ ಆಘಾತ” ಎಂದಿದ್ದಾರೆ.
ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಅಮಿತ್, “ನನ್ನನ್ನು ತಕ್ಷಣವೇ ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ನನ್ನ ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ತಡರಾತ್ರಿಯ ವೇಳೆಗೆ, ಎಲ್ಲವೂ ನಿಯಂತ್ರಣಕ್ಕೆ ಬಂದಂತೆ ಕಂಡಿತು, ಆದರೆ ಮರುದಿನ ಬೆಳಿಗ್ಗೆ, ನಾನು ಐಸಿಯುನಲ್ಲಿ ನಡೆಯಲು ಪ್ರಯತ್ನಿಸಿದಾಗ, ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದೆ. ಈ ಬಾರಿ ನನ್ನ ರಕ್ತದೊತ್ತಡ ತೀವ್ರವಾಗಿ ಕುಸಿದಿತ್ತು, ವೈದ್ಯರು ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾದರು. ನಂತರ ನಾಲ್ಕು ದಿನಗಳ ಕಾಲ ಇಸಿಜಿ (ECG), ಎಲ್‌ಎಫ್‌ಟಿ (LFT), ಎಕೋ (ECHO), ಕೊಲೆಸ್ಟ್ರಾಲ್ (Cholesterol) ಮತ್ತು ನೋವಿನ ಆಂಜಿಯೋಗ್ರಫಿಯಂತಹ (Angiography) ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು – ಆದರೆ ಆಶ್ಚರ್ಯಕರವಾಗಿ, ಎಲ್ಲವೂ ಸರಿಯಾಗಿವೆ ಎಂದು ವರದಿ ಬಂದವು.”
ತಮ್ಮ ಸ್ಥಿತಿಯ ಬಗ್ಗೆ ಮಾತನಾಡಿರುವ ಅವರು, “ಯಾವುದೇ ಮುನ್ಸೂಚನೆ ಇಲ್ಲದೆ ನನ್ನ ರಕ್ತದೊತ್ತಡ ಅಷ್ಟು ಹೆಚ್ಚಾಗಿ, ಇದ್ದಕ್ಕಿದ್ದಂತೆ ಹೇಗೆ ಕುಸಿಯಿತು? ನಾನು ಇನ್ನೂ ಚಿಕಿತ್ಸೆಯಲ್ಲಿದ್ದೇನೆ ಮತ್ತು ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಆದರೆ ಈ ಅನುಭವ ನನಗೆ ಕೆಲವು ಪ್ರಮುಖ ಪಾಠಗಳನ್ನು ಕಲಿಸಿತು.” ಎಂದು ತಿಳಿಸಿದ್ದಾರೆ.