ಚಂಡೀಗಢ: ಪಂಜಾಬ್ ಪೊಲೀಸಿನ ಇನ್‌ಸ್ಟಾಗ್ರಾಮ್ ಸ್ಟಾರ್ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಅವರು ಮಾದಕ ದ್ರವ್ಯದೊಂದಿಗೆ ಸಿಕ್ಕಿಬಿದ್ದು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸ್ ಮತ್ತು ಮಾದಕ ದ್ರವ್ಯ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ಆಕೆಯ ಬಳಿಯಿಂದ 17 ಗ್ರಾಂ ಗಿಂತಲೂ ಹೆಚ್ಚು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾ ಮಾಡಲಾಗಿದೆ.
ಬಟಿಂಡಾ ಬಳಿಯ ಬಾದಲ್ ಮೇಲ್ಸೇತುವೆ ಹತ್ತಿರ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಮನ್‌ದೀಪ್ ಕೌರ್ ಅವರು ಥಾರ್ ಎಸ್‌ಯುವಿಯಲ್ಲಿ ಹೆರಾಯಿನ್ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಎಂಬ ವ್ಯಕ್ತಿಯೂ ಆಕೆಯೊಂದಿಗೆ ಇದ್ದರು. ಅಷ್ಟೇ ಅಲ್ಲದೆ, ಗುರುಮೀತ್ ಕೌರ್ ಎಂಬ ಮಹಿಳೆಯೊಬ್ಬರು ಅಮನ್‌ದೀಪ್ ಕೌರ್ ತನ್ನ ಪತಿ, ಆಂಬ್ಯುಲೆನ್ಸ್ ಚಾಲಕ ಬಲ್ವಿಂದರ್ ಸಿಂಗ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಫಾಲೋವರ್‌ಗಳನ್ನು ಹೊಂದಿರುವ ಅಮನ್‌ದೀಪ್ ಕೌರ್ ಈ ಹಿಂದೆಯೂ ವಿವಾದಗಳಿಗೆ ಗುರಿಯಾಗಿದ್ದರು. ಪೊಲೀಸ್ ಸಮವಸ್ತ್ರದಲ್ಲಿ ರೀಲ್ಸ್ ಮಾಡಬಾರದೆಂಬ ಪೊಲೀಸ್ ಮುಖ್ಯಸ್ಥರ ಆದೇಶವನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಆಕೆ ಸುದ್ದಿಯಲ್ಲಿದ್ದರು. ಇದೀಗ ಗುರುಮೀತ್ ಕೌರ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಅಮನ್‌ದೀಪ್ ಕೌರ್‌ಗೆ 2 ಕೋಟಿ ರೂಪಾಯಿ ಮೌಲ್ಯದ ಮನೆ, ಲಕ್ಷಾಂತರ ರೂಪಾಯಿ ಬೆಲೆಯ ಕಾರುಗಳು ಮತ್ತು ವಾಚ್‌ಗಳಿವೆ ಎಂದು ಆರೋಪಿಸಿದ್ದು, ಆಕೆ ತನ್ನ ಪತಿ ಬಲ್ವಿಂದರ್ ಸಿಂಗ್‌ನೊಂದಿಗೆ ಸೇರಿ ಹೆರಾಯಿನ್ ಮಾರಾಟ ಮಾಡುತ್ತಿದ್ದಾಳೆ ಎಂದೂ ದೂರಿದ್ದಾರೆ.
ಒಟ್ಟಿನಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಮಿಂಚುತ್ತಿದ್ದ ಈ ಪೊಲೀಸ್ ಅಧಿಕಾರಿಯ ಬಣ್ಣ ಬಯಲಾಗಿದ್ದು, ಡ್ರಗ್ಸ್ ಮತ್ತು ಅಕ್ರಮ ಸಂಬಂಧದ ಆರೋಪಗಳು ಆಕೆಯ ವೃತ್ತಿ ಜೀವನಕ್ಕೆ ಕಂಟಕವಾಗಿ ಪರಿಣಮಿಸಿವೆ.