ವಿಜ್ಞಾನ ಮತ್ತು ತಂತ್ರಜ್ಞಾನದ ಮುಂದುವರೆದ ಭಾಗವಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಇದೀಗ ಒಂದು ಮಹತ್ತರವಾದ ಆವಿಷ್ಕಾರ ನಡೆದಿದೆ. ಮೆಕ್ಸಿಕೋದ ಗ್ವಾಡಲಜಾರದಲ್ಲಿ ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಮಗುವೊಂದು ಜನಿಸಿದ್ದು, ಇದು ವಿಶ್ವದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಐವಿಎಫ್ (IVF) ವಿಧಾನದಲ್ಲಿ ಅನುಭವಿ ವೈದ್ಯರು ವೀರ್ಯಾಣುವನ್ನು ಮೊಟ್ಟೆಗೆ ಸೇರಿಸುವ ಪ್ರಕ್ರಿಯೆಯನ್ನು ನಿರ್ವಹಿಸುತ್ತಾರೆ. ಆದರೆ, ಈ ಬಾರಿ ಸಂಪೂರ್ಣ ಸ್ವಯಂಚಾಲಿತ ಐವಿಎಫ್ ವ್ಯವಸ್ಥೆ ಮತ್ತು AI ತಂತ್ರಜ್ಞಾನವನ್ನು ಬಳಸಲಾಗಿದೆ. 40 ವರ್ಷದ ಮಹಿಳೆಯೊಬ್ಬರು ಈ ನೂತನ ತಂತ್ರಜ್ಞಾನದ ಸಹಾಯದಿಂದ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ, ಇಡೀ ಐಸಿಎಸ್‌ಐ (Intracytoplasmic Sperm Injection) ಪ್ರಕ್ರಿಯೆಯನ್ನು ಯಾವುದೇ ಮಾನವ ಸ್ಪರ್ಶವಿಲ್ಲದೆ ಕೇವಲ ಯಂತ್ರಗಳೇ ನಿರ್ವಹಿಸಿವೆ.
ನ್ಯೂಯಾರ್ಕ್ ಮತ್ತು ಮೆಕ್ಸಿಕೋದ ವಿಜ್ಞಾನಿಗಳು ಜಂಟಿಯಾಗಿ ಈ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. AI ಮತ್ತು ಡಿಜಿಟಲ್ ನಿಯಂತ್ರಣದೊಂದಿಗೆ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯು ವೀರ್ಯಾಣುವನ್ನು ಆಯ್ಕೆ ಮಾಡುವುದರಿಂದ ಹಿಡಿದು ಅದನ್ನು ಮೊಟ್ಟೆಗೆ ಸೇರಿಸುವವರೆಗಿನ ಎಲ್ಲಾ 23 ಹಂತಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಪ್ರತಿ ಮೊಟ್ಟೆಯ ಪ್ರಕ್ರಿಯೆಗೆ ಕೇವಲ 10 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಈ ತಂತ್ರಜ್ಞಾನದ ಮಹತ್ವದ ಕುರಿತು ಮಾತನಾಡಿದ ಪ್ರಮುಖ ಭ್ರೂಣಶಾಸ್ತ್ರಜ್ಞ ಡಾ. ಜಾಕ್ವೆಸ್ ಕೋಹೆನ್, “ಇದು ಐವಿಎಫ್ ಜಗತ್ತಿನಲ್ಲಿ ಒಂದು ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ. ಈ ತಂತ್ರಜ್ಞಾನದಿಂದ ಮಾನವನಿಂದಾಗುವ ತಪ್ಪುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಮತ್ತು ಮೊಟ್ಟೆಯ ಗುಣಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶೇಕಡಾ 80 ರಷ್ಟು ಮೊಟ್ಟೆಗಳು ಯಶಸ್ವಿಯಾಗಿ ಫಲವತ್ತಾಗಿದ್ದು, ಆರೋಗ್ಯಕರ ಭ್ರೂಣವನ್ನು ಹೆಪ್ಪುಗಟ್ಟಿ ನಂತರ ಗರ್ಭಾಶಯಕ್ಕೆ ವರ್ಗಾಯಿಸಲಾಯಿತು.
ವೈದ್ಯಕೀಯ ತಜ್ಞರ ಅಭಿಪ್ರಾಯದ ಪ್ರಕಾರ, ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನವು ಇನ್ನಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಐವಿಎಫ್ ಚಿಕಿತ್ಸೆಯ ವೆಚ್ಚ ಕಡಿಮೆಯಾಗಬಹುದು ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳನ್ನು ಹೊಂದುವ ಆಶಾಕಿರಣ ಮೂಡಲಿದೆ.
