ಕಣ್ಮನ ಸೆಳೆಯುವ ಸ್ಥಳ ಉಡುಪಿಯ ವರಂಗ ಕೆರೆ ಬಸದಿ….!

ಉಡುಪಿ ಎಂದಾಕ್ಷಣ ನೆನಪಾಗೋದೇ ಶ್ರೀಕೃಷ್ಣ ಮಠ. ಇದನ್ನ ಬಿಟ್ಟರೆ ಮಲ್ಪೆ ಬೀಚ್​, ಮರವಂತೆ ಸಮುದ್ರ ಹೀಗೆ ಹೆಸರಾಂತ ಕೆಲ ಸ್ಥಳಗಳು ನಿಮ್ಮ ಕಣ್ಮುಂದೆ ಬರಬಹುದು. ಆದರೆ ಇದೇ ಉಡುಪಿ ಜಿಲ್ಲೆಯಲ್ಲಿ ದಕ್ಷಿಣ ಭಾರತದಲ್ಲೇ ಕಾಣದಂತಹ ಒಂದು ಪದ್ಮಾವತಿ ದೇವಿಯ ಬಸದಿ ಇದೆ ಅನ್ನೋ ವಿಚಾರ ನಿಮಗೆ ತಿಳಿದಿದೆಯೇ..?

ಪಶ್ಚಿಮ ಘಟ್ಟದ ಸಾಲು ಒಂದೆಡೆಯಾದ್ರೆ ಇನ್ನೊಂದು ಕಡೆ ಹಸಿರನ್ನೇ ಹೊದ್ದು ಮಲಗಿದ ತೋಟ ಹಾಗೂ ಗದ್ದೆ. ಇವೆಲ್ಲದರ ನಡುವೆ ಹರಡಿದ ವಿಶಾಲವಾದ ಕೆರೆ. ಇಷ್ಟಕ್ಕೇ ಈ ಪ್ರೇಕ್ಷಣಿಯ ಸ್ಥಳದ ಮೆರಗು ಮುಗೀತು ಎಂದುಕೊಳ್ಳಬೇಡಿ. ಈ ವಿಶಾಲ ಕೆರೆಯ ಹೃದಯಭಾಗದಲ್ಲಿ ತಲೆ ಎತ್ತಿರುವ ಪದ್ಮಾವತಿ ದೇವಿಯ ಬಸದಿಯ ಅಂದವನ್ನ ನೋಡೋದೇ ಒಂದು ಚಂದ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿ ಇಂತಹದ್ದೊಂದಯ ಅದ್ಭುತ ಸ್ಥಳವಿದೆ. ವರಂಗಕ್ಕೆ ಬಂದು ಪದ್ಮಾವತಿ ದೇವಿ ದರ್ಶನ ಪಡೆಯಬೇಕು ಅಂದರೆ ದೋಣಿ ಮಾರ್ಗವೊಂದೇ ದಾರಿ. ಆದರೆ 100 ಮೀಟರ್​ನ ಆ ದೋಣಿ ವಿಹಾರವೇ ನಿಮ್ಮ ಪ್ರವಾಸಕ್ಕೆ ತಿಲಕವಿಟ್ಟಂತೆ ಇರಲಿದೆ ಅಂದರೆ ತಪ್ಪಾಗಲಿಕ್ಕಿಲ್ಲ.

ಜಲರಾಶಿ, ಹಸಿರ ರಾಶಿ ನಡುವೆ ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟಿವೆ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದು. ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ, ಯಕ್ಷಿಯರ ಬಿಂಬಗಳಿವೆ. ಪೂರ್ವದಲ್ಲಿರುವ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿ ನೆಲೆಸಿದ್ದಾಳೆ. ಈ ಎಲ್ಲಾ ಮೂರ್ತಿಗಳು 12ನೇ ಶತಮಾನದವು ಎಂದು ಹೇಳಲಾಗುತ್ತೆ. ಈ ಕೆರೆಯನ್ನ ಆಳುಪ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆ ಎಂದು ಇತಿಹಾಸ ಹೇಳುತ್ತೆ.

ಎಲ್ಲಿದೆ ವರಂಗ..?

ಪದ್ಮಾವತಿ ದೇವಿಯ ದರ್ಶನ ಮಾಡಬೇಕು ಅಂದರೆ ಪೂಜಾರಿಗಳೇ ನಿಮ್ಮನ್ನ ದೋಣಿಯಲ್ಲಿ ದೇವಸ್ಥಾನಕ್ಕೆ ಕರೆದೊಯ್ತಾರೆ. ಆದರೆ ಈ ವರಂಗ ಎಲ್ಲಿದೆ ಎಂದು ನೀವು ಯೋಚನೆ ಮಾಡ್ತಿದ್ರೆ ಇದಕ್ಕೆ ಉತ್ತರ ಇಲ್ಲಿದೆ. ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿಲೋಮೀಟರ್​ ದೂರದಲ್ಲಿದೆ. ಕಾರ್ಕಳದಿಂದ ಸುಮಾರು 25 ಕಿಲೋಮೀಟರ್ ಮಾರ್ಗ ಹಾಗೂ ಮಂಗಳೂರಿನಿಂದ 85 ಕಿಲೋಮೀಟರ್​ ದೂರದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read