ಹುಬ್ಬಳ್ಳಿ: ಖ್ಯಾತ ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಲವ್ ಜಿಹಾದ್, ಯುವತಿ ಅಪಹರಿಸಿ ಮದುವೆಯಾಗಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಇದೀಗ ಯೂಟ್ಯೂಬರ್ ಮುಕಳೆಪ್ಪಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್, ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಹಾಗೂ ಅಪಹರಣ ಆರೋಪದಡಿ ಯುವತಿ ಸಂತ್ರಸ್ತರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ರಕ್ಷಣೆ ಮಾಡುವುದಕ್ಕೆ ಮೊದಲ ಆಧ್ಯತೆ ನೀಡಿದ್ದೇವೆ. ಕ್ವಾಜಾ ಶುರಹಟ್ಟಿ ಅಲಿಯಾಸ್ ಮುಕಳೆಪ್ಪನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ.
ಶೀಘ್ರದಲ್ಲಿ ಯುವತಿಯನ್ನು ರಕ್ಷಿಸಿ ಕ್ವಾಜಾ ಶಿರಹಟ್ಟಿಯನ್ನು ವಿಚಾರಣೆ ಮಾಡುತ್ತೇವೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು. ಯುವತಿ ಸೋಷಿಯಲ್ ಮೀಡಿಯಾಗಳಲ್ಲಿ ಬಿಟ್ಟಿರುವ ಸ್ಪಷ್ಟನೆ ವಿಡಿಯೋ ಪರಿಗಣಿಸಲು ಸಾಧ್ಯವಿಲ್ಲ. ಆಕೆ ಯಾವ ಸ್ಥಿತಿಯಲ್ಲಿ ಹೇಳಿದ್ದಾಳೆ ಎಂದು ನಿರ್ಧರಿಸಲಾಗಲ್ಲ. ಹಾಗಾಗಿ ಆಕೆಯನ್ನು ರಕ್ಷಿಸಿದ ಬಳಿಕ ಹೇಳಿಕೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.