ಧರ್ಮ, ಜಾತಿ ದುರ್ಬಳಕೆ ಮಾಡಿಕೊಳ್ಳುವ ವಿಕೃತರಿಂದ ದೂರವಿರಿ: ಸಿಎಂ ಸಿದ್ಧರಾಮಯ್ಯ

ದಾವಣಗೆರೆ: ದುಷ್ಟ ಶಕ್ತಿಗಳು ನಮ್ಮ ರಾಜ್ಯದ ಮತ್ತು ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ದೇಶದ, ರಾಜ್ಯದ ಪ್ರಗತಿಯೂ ನಾಶವಾಗುತ್ತದೆ. ಇಂಥಾ ವಿಕೃತರಿಂದ ಯುವ ಜನತೆ ದೂರ ಉಳಿದು ತಮ್ಮ ಬದುಕು-ಭವಿಷ್ಯ ಕಾಪಾಡಿಕೊಳ್ಳಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಾಜದ ಪ್ರಗತಿಗೆ ಕಾರಣರಾಗಬೇಕು ಎಂದು ಹೇಳಿದ್ದಾರೆ.

ನಾವು ದೇಶಕ್ಕೆ ಹೊರೆಯಾಗದೆ, ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕು ಎನ್ನುವ ಸಂಕಲ್ಪದೊಂದಿಗೆ ಯುವ ಜನತೆ ಸಜ್ಜಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಸಂವಿಧಾನದ ಸಾರ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು. ಪ್ರತೀ ಪ್ರಜೆಗೂ ಅರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮ ನಂಬಿಕೆಯ ಆಚರಣೆಗೆ ಅವಕಾಶ ಇರಬೇಕು ಎನ್ನುವುದೇ ಸಂವಿಧಾನದ ಸಾರ. ಈ ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಆದ್ದರಿಂದ ಈ ಸಂವಿಧಾನವನ್ನು ಕಾಪಾಡುವುದೇ ನಮ್ಮ ಜವಾಬ್ದಾರಿ ಎಂದರು.

ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ, ದೇಶಕ್ಕೆ ನಾವೇನು ಕೊಟ್ಟೆವು ಎನ್ನುವುದೇ ನಮಗೆ ಮುಖ್ಯವಾಗಬೇಕು. ಅನೇಕ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥಾ ವಿಕೃತರಿಂದ ಯುವ ಜನತೆ ದೂರ ಉಳಿದು ಮನುಷತ್ಯ ಬೆಳೆಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು. ಇದರಿಂದ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಸಾಧ್ಯ ಎಂದು ಹೇಳಿದ್ದಾರೆ.

ಒಂದು ಲಕ್ಷದ 62 ಸಾವಿರ ಮಂದಿ ಯುವ ಜನತೆಯ ಖಾತೆಗೆ ಯುವನಿಧಿ ಹಣ ವರ್ಗಾವಣೆ ಮಾಡಿ, ಇವರಿಗೆ ಕೌಶಲ್ಯ ತರಬೇತಿಯನ್ನೂ ನೀಡುತ್ತಿದ್ದೇವೆ. ಇದಕ್ಕಾಗಿ 213 ಕೋಟಿ ರೂ. ಹಣ ಕೊಟ್ಟಿದ್ದೇವೆ. ವಿದ್ಯಾವಂತ ನಿರುದ್ಯೋಗಿ ಪದವೀಧರರ ನೆರವಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಸಂಕಲ್ಪದಿಂದ ನಾವು ಕೆಲಸ ಮಾಡುತ್ತಿದ್ದೇವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read