ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪೋಸ್ಟ್ ಹಾಕಿದ್ದ ಯುವಕನನ್ನು ಕಲಬುರಗಿ ಜಿಲ್ಲೆ ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.
ಯಡ್ರಾಮಿ ತಾಲೂಕಿನ ಇಜೇರಿಯ ಆನಂದ ಗುತ್ತೇದಾರ(22) ಬಂಧಿತ ಯುವಕ. ಈತ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಕಾಬಾ ಮೇಲೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಗವಾಧ್ವಜ ಹಿಡಿದು ನಿಂತಿರುವಂತೆ ಎಡಿಟ್ ಮಾಡಿದ ಫೋಟೋ ಹಾಕಿದ್ದ. ಈ ಸಂಬಂಧ ಸೈಯದ್ ಪಟೇಲ್ ಜೇವರ್ಗಿ ಠಾಣೆಗೆ ದೂರು ನೀಡಿದ್ದರು.
ಶನಿವಾರ ರಾತ್ರಿ ಜೇವರ್ಗಿ ಪೊಲೀಸ್ ಠಾಣೆಯ ಮುಂದೆ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಆನಂದ ಗುತ್ತೇದಾರನನ್ನು ಪೊಲೀಸರು ಬಂಧಿಸಿದ್ದಾರೆ.