ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಡೇಟಿಂಗ್ ಮಾಡಲು ಯುವತಿಯರು, ಆಂಟಿಯರು ಸಿಕ್ತಾರೆ. ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಅಪಪ್ರಚಾರ ಮಾಡಿದ್ದ ಕಿಡಿಗೇಡಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ನಾಗಪ್ಪ ಹನುಮಂತ ಲಮಾಣಿ(26) ಬಂಧಿತ ಆರೋಪಿ. ಮಡಿಕೇರಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಿಡಿಯೋ ಬಳಸಿಕೊಂಡು ಡೇಟಿಂಗ್ ಮಾಡಲು ಯುವತಿಯರು, ಆಂಟಿಯರು ಸಿಗುತ್ತಾರೆ. ಸರ್ವಿಸ್ ಬೇಕಾದರೆ ಕರೆ ಮಾಡಿ ಎಂದು ಮೊಬೈಲ್ ಸಂಖ್ಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪದಡಿ ನಾಗಪ್ಪನನ್ನು ಬಂಧಿಸಲಾಗಿದೆ.
ನಾಗಪ್ಪ ಕೊಡಗು ಜಿಲ್ಲೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ ಬಗ್ಗೆ ವಿವಿಧ ಸಂಘ-ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು. ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಣಗಾವಲು ತಂಡ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದೆ.
ಕೊಡಗು ಎಸ್ಪಿ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಸೂರಜ್ ಪಿ.ಎ., ಮಡಿಕೇರಿ ನಗರ ಸಿಪಿಐ ರಾಜು ಪಿ.ಕೆ., ಪಿಎಸ್ಐ ಅನ್ನಪೂರ್ಣ ಎಸ್.ಎಸ್. ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದೆ.