ಡುಮ್ಕಾ: ನಮ್ಮ ಮಗಳನ್ನು ನಿನಗೆ ಮದುವೆ ಮಾಡಿಕೊಡಲ್ಲ ಎಂದು ಯುವತಿಯ ಪೋಷಕರು ಗದರಿದ್ದಕ್ಕೆ ಯುವಕ ಚಾಕುವಿನಿಂದ ಯುವತಿಯ ತಂದೆ-ತಾಯಿಯನ್ನೇ ಕೊಲೆಗೈದಿರುವ ಘಟನೆ ಜಾರ್ಖಂಡ್ ನ ಡುಮ್ಕಾದ ಶಿಕಾರಿಪರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಸುಂದರಪ್ಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಹೇಬ್ ಹೆಂಬ್ರಾಮ್ (62) ಹಾಗೂ ಪತ್ನಿ ಮಂಗಲಿ ಕಿಸ್ಕು (60) ಕೊಲೆಯಾದ ದಂಪತಿ. ದಂಪತಿಯ ಇಬ್ಬರು ಹೆಣ್ಣು ಮಕ್ಕಳಾದ ಹಿರಾಮುನಿ ಹೆಂಬ್ರಾಮ್ ಹಾಗೂ ಬೆನಿ ಹೆಂಬ್ರಾಮ್ ಗೂ ಚಾಕುವಿನಿಂದ ಇರಿಯಲಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.
ಪಾಕೂರ್ ನಿವಾಸಿ ಲೋಕೇಶ್ ಕೊಲೆ ಆರೋಪಿ. 2024ರಲ್ಲಿ ಫೇಸ್ ಬುಕ್ ನಲ್ಲಿ ಹಿರಾಮುನಿಗೆ ಫೇಸ್ ಬುಕ್ ನಲ್ಲಿ ಲೋಕೇಶ್ ಪರಿಚಯವಾಗಿದ್ದ. ಈತ ದಿವ್ಯಾಂಗನಾಗಿದ್ದು ಒಂದು ಕೈ ಸ್ವಾದೀನವಿರಲಿಲ್ಲ. ಇಬ್ಬರ ನಡುವೆ ಸ್ನೇಹದಿಂದಾಗಿ ಲೋಕೇಶ್ ಹಿರಾಮುನಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಆದರೆ ಹಿರಾಮುನಿ ಕುಟುಂಬದವರು ಒಪ್ಪಿರಲಿಲ್ಲ. ಇದರಿಂದ ಲೋಕೇಶ್ ಸ್ನೇಹದಿಂದಲೂ ಹಿರಾಮುನಿ ದೂರಾಗಿದ್ದಳು.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಹಿರಾಮುನಿಗೆ ಲೋಕೇಶ್ ಕರೆ ಮಾಡಿದ್ದರೂ ಆಕೆ ತಂದೆಯ ಸೂಚನೆ ಮೇರೆಗೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಲೋಕೇಶ್ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಚಾಕು ಸಮೇತ ಹಿರಾಮುನಿ ಮನೆಗೆ ನುಗ್ಗಿದ್ದಾನೆ. ನಿಮ್ಮ ಮಗಳನ್ನಿ ತನಗೆ ಮದುವೆ ಮಾಡಿಕೊಡುವಂತೆ ಹಿರಾಮುನಿ ಪೋಷಕರನ್ನು ಕೇಳಿದ್ದಾನೆ. ಅದಕ್ಕೆ ಅವರು ನಮ್ಮ ಮಗಳನ್ನು ನಿನಗೆ ಕೊಡಲ್ಲ ಎಂದಿದ್ದಾರೆ. ಈ ವೇಳೆ ಚಾಕು ತೆಗೆದು ಹಿರಾಮಿನಿ ಪೋಷಕರ ಮೇಲೆ ದಾಳಿ ನಡೆಸಿದ್ದಾನೆ. ಹಿರಾಮುನಿ ಹಾಗೂ ಆಕೆಯ ಸಹೋದರಿ ತಂದೆ-ತಾಯಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಈ ವೇಳೆ ಅವರಿಗೂ ಇರಿದಿದ್ದಾನೆ. ಇಬ್ಬರೂ ಮನೆಯಿಂದ ಹೊರಬಂದು ಆತನಿಂದ ತಪ್ಪಿಸಿಕೊಂಡಿದ್ದಾರೆ. ಲೋಕೇಶ್ ನಿಂದ ಗಂಭೀರವಾಗಿ ಹಲ್ಲೆಗೊಳಗಾದ ಹಿರಾಮುನಿ ತಂದೆ-ತಾಯಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.