ನವದೆಹಲಿ: ನಿಶ್ಚಿತಾರ್ಥವಾಗಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯ ಸಡಗರದಲ್ಲಿದ್ದ ಯುವತಿ ಭಾವಿ ಪತಿಯೊಂದಿಗೆ ವಾಟರ್ ಪಾರ್ಕ್ ಗೆ ಹೋಗಿ ದುರಂತಕ್ಕೀಡಾಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಹಸೆಮಣೆಯೇರಲು ಸಿದ್ಧಳಾಗಿದ್ದ ಯುವತಿ ರೋಲರ್ ಕೋಸ್ಟರ್ ಆಡುವಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಿಯಾಂಕಾ (೨೪) ಮೃತ ದುರ್ದೈವಿ. ಭಾವಿ ಪತಿ ನಿಖಿಲ್ ಜೊತೆಗೆ ಪ್ರಿಯಾಂಕಾ, ದೆಹಲಿಯ ಕಪಶೇರಾ ಬಳಿಯ ಫನ್ ಎನ್ ಫುಡ್ ವಾಟರ್ ಪಾರ್ಕ್ ಗೆ ಹೋಗಿದ್ದಳು. ಈ ವೇಳೆ ರೋಲರ್ ಕೋಸ್ಟರ್ ಆಡುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸ್ವಿಂಗ್ ರೀತಿಯ ರೈಡ್ ನಲ್ಲಿ ಕುಳಿತಿದ್ದ ಪ್ರಿಯಾಂಕಾ, ಸ್ಟ್ಯಾಂಡ್ ಮುರಿದು ಎತ್ತರದಿಂದ ಕೆಳಗೆ ಬಿದ್ದಿದ್ದಾಲೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮೃತ ಪ್ರಿಯಂಕಾ ನೊಯ್ಡಾದಲ್ಲಿ ಟೆಲಿಕಾಂ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಮುಂದಿನ ವರ್ಷ ಫೆಬ್ರವರಿಯಲ್ಲಿ ಮದುವೆಗೆ ಡಿನಾಂಕ ನಿಗದಿಯಾಗಿತ್ತು. ಆದರೆ ಯುವತಿ ಭಾವಿ ಪತಿ ಕಣ್ಮುಂದೆಯೇ ದುರಂತ ಅಂತ್ಯ ಕಂಡಿದ್ದಾಳೆ.