ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ ಮೀನಿನ ದಾಳಿಗೆ ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.
ದಾಂಡೆಭಾಗ ನಿವಾಸಿ ಅಕ್ಷಯ್ (24) ಮೃತ ಯುವಕ. ಎಂದಿನಂತೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ ನೀರಿನಿಂದ ಹಾರಿಬಂದ ಮೀನೊಂದು ಯುವಕನ ಹೊಟ್ಟೆಗೆ ಚುಚ್ಚಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೊಟ್ಟೆಯ ಭಾಗದ ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದರು.
ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರೂ ನೋವು ಕಡಿಮೆಯಾಗಿರಲಿಲ್ಲ. ಇದರಿಂದ ಅಕ್ಷಯ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.