‘ಹೇ ದೋಸ್ತಿ ಹಮ್ ನಹೀ ತೋಡೆಂಗೆ’ ಮೂಲಕ ಈಜಿಪ್ಟ್ ಯುವತಿಯಿಂದ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ | Watch

ಅಮೆರಿಕಾದ ಯಶಸ್ವಿ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಈಜಿಪ್ಟ್ ನ ಕೈರೋದಲ್ಲಿ ಬಂದಿಳಿದಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ತೆರಳಿರುವ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಈಜಿಪ್ಟ್ ಪ್ರಧಾನಿ ಮೊಸ್ತಾಫಾ ಮತ್ತವರ ಸಂಪುಟ ಸಹೋದ್ಯೋಗಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತದ ಸಾಂಪ್ರದಾಯಿಕ ಉಡುಗೆ ಸೀರೆ ಧರಿಸಿದ್ದ ಈಜಿಪ್ಟ್ ಯುವತಿಯೊಬ್ಬರು ಅಮಿತಾಬ್ ಬಚ್ಚನ್ – ಧರ್ಮೇಂದ್ರ ಅಭಿನಯದ ‘ಶೋಲೆ’ ಚಿತ್ರದ ‘ಹೇ ದೋಸ್ತಿ ಹಮ್ ನಹೀ ತೋಡೆಂಗೆ’ ಹಾಡಿನ ಮೂಲಕ ಸ್ವಾಗತ ಕೋರಿದ್ದಾರೆ. ಹಿಂದಿ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಈಜಿಪ್ಟ್ ಯುವತಿಯ ಗೀತೆಯನ್ನು ತದೇಕಚಿತ್ತದಿಂದ ಆಲಿಸಿದ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಯುವತಿ, ತಾನು ಆರು ವರ್ಷದ ವಯಸ್ಸಿನಿಂದಲೇ ಹಿಂದಿ ಗೀತೆಗಳನ್ನು ಹಾಡುತ್ತಿರುವುದಾಗಿ ತಿಳಿಸಿದ್ದು, ಅಲ್ಲದೇ ಹಿಂದಿ ಭಾಷೆಯ ಅಲ್ಪಸ್ವಲ್ಪ ತಿಳುವಳಿಕೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಆಕೆ ಭಾರತಕ್ಕೆ ಈವರೆಗೂ ಭೇಟಿ ನೀಡಿಲ್ಲವಂತೆ. ಈ ಮಾತುಗಳನ್ನು ಕೇಳಿದ ನರೇಂದ್ರ ಮೋದಿಯವರು, ನಿಮ್ಮ ಹಾಡಿನ ಉಚ್ಚಾರಣೆ ಕೇಳಿದವರು ನೀವು ಈಜಿಪ್ಟ್ ನವರೋ ಅಥವಾ ಭಾರತದ ಮಹಿಳೆಯೋ ಎಂದು ಗುರುತಿಸಲು ಆಗುವುದಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಂದಹಾಗೆ ಭಾರತದ ಪ್ರಧಾನಿಯೊಬ್ಬರು 26 ವರ್ಷಗಳ ಬಳಿಕ ಈಜಿಪ್ಟ್ ಗೆ ಭೇಟಿ ನೀಡಿದ್ದು, ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಅವರೊಂದಿಗೆ ನರೇಂದ್ರ ಮೋದಿಯವರು ಪ್ರಮುಖ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read