ಬೆಂಗಳೂರು: ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಬಿಜೆಪಿ ಶಾಸಕ ಯತ್ನಾಳ್ ಬಣ ಇದೀಗ ಮತ್ತೆ ಆಕ್ಟೀವ್ ಆಗಿದೆ. ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ ಬಳಿಕ ಅದಕ್ಕೆ ಯತ್ನಾಳ್ 9 ಪುಟಗಳ ಉತ್ತರ ನೀಡಿದ್ದರು. ಈ ಬೆಳವಣಿಗೆ ಬಳಿಕ ಕೊಂಚ ತಣ್ಣಗಾಗಿದ್ದ ಯತ್ನಾಳ್ ಟೀಂ, ಈಗ ಮತ್ತೆ ಚಟುವಟಿಕೆ ಆರಂಭಿಸಿದೆ.
ವರಿಷ್ಠರ ಗಮನ ಸೆಳೆಯುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನಲ್ಲಿ ಯತ್ನಾಳ್ ಟೀಂ ಮತ್ತೆ ಸಭೆ ನಡೆಸಲಿದೆ. ಸದಾಶಿವ ನಗರದಲ್ಲಿರುವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಯತ್ನಾಳ್ ಬಣ ಸಭೆ ನಡೆಸಲಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೆಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಅರವಿಂದ್ ಲಿಂಬಾವಳಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.