ವಿಜಯಪುರ: ಧರ್ಮಸ್ಥಳದ ಹೆಸರು ಕೆಡಿಸಲು ಉದ್ದೇಶಪೂರ್ವಕವಾಗಿ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಧರ್ಮಸ್ಥಳದ ಬುರುಡೆ ಕೇಸ್ ವ್ಯವಸ್ಥಿತ ಷಡ್ಯಂತ್ರ. 13 ಕಡೆ ಅಗೆದರೂ ಏನೂ ಸಿಕ್ಕಿಲ್ಲ. ಹಿಟಾಚಿಯಿಂದ ಅಗೆದರೂ ಏನೂ ಪತ್ತೆಯಾಗಿಲ್ಲ. ಅಂದ ಮೇಲೆ ಇದು ಷಡ್ಯಂತ್ರ ಅಲ್ಲದೇ ಬೇರೇನು? ಕಮ್ಯೂನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್ ನ ಕೆಲ ಹಿಂದೂ ವಿರೋಧಿಗಳ ಆಟವಿದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ತನಿಖೆಗೆ ಸಿಎಂ ಸಿದ್ದರಾಮಯ್ಯನವರು ಎಸ್ ಐಟಿ ರಚನೆ ಮಾಡಿದ್ದಾರೆ. ಅನಾಮಿಕ ದಿನದಿಂದ ದಿನಕ್ಕೆ ಒಂದೊಂದು ಹೊಸ ಜಾಗ ಹೇಳುತ್ತಿದ್ದಾನೆ. ಇನ್ನೂ 30 ಜಾಗ ತೋರಿಸುತ್ತೇನೆ ಎಂದಿದ್ದಾನೆ. ಎಲ್ಲಾ ಕಡೆ ಅಗೆಯುತ್ತಾ ಹೋಗಲು ಆಗುತ್ತಾ? ಮುಂದೊಂದು ದಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೆಳಗೆ ಹೂತಿದೀನಿ ಅಂತ ಹೇಳಿದರೆ ಅಲ್ಲಿಯೂ ಶೋಧ ಮಾಡ್ತೀರಾ? ಇದು ಧರ್ಮಸ್ಥಳ ಹೆಸರು ಕೆಡಿಸಲು ನಡೆಸಿರುವ ವ್ಯವಸ್ಥಿತ ಪಿತೂರಿ. ಅನಾಮಿಕ ವ್ಯಕ್ತಿ, ಯೂಟ್ಯೂಬರ್ ಸಮೀರ್ ಎಂಡಿ, ತಿಮರೋಡಿ ಎಲ್ಲರ ಬ್ರೇನ್ ಮ್ಯಾಪಿಂಗ್ ಮಾಡಿ ಎಂದು ಆಗ್ರಹಿಸಿದರು.