ಹುಬ್ಬಳ್ಳಿ: ಮರು ಜಾತಿಗಣತಿ ಸಮೀಕ್ಷೆ ಮೂರ್ಖ ತನದ ಸರ್ವೆ. ತಕ್ಷಣ ಈ ಸಮೀಕ್ಷೆ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಜಾತಿ ಗಣತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇದೊಂದು ಮೂರ್ಖತನದ ಕೆಲಸ. ಹಿಂದೂ ಧರ್ಮದ ಜಾತಿ ಜಾತಿಗಳನ್ನು ಒಡೆದು ಮುಸ್ಲಿಂರ ಕೈಗೆ ಆಡಳಿತ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಲಿಂಗಾಯಿತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಹೀಗೆ ಎಲ್ಲಾ ಸಮುದಾಯಗಳಲ್ಲಿಯೂ ಕ್ರಿಶ್ಚಿಯನ್ ಎಂದು ಬರೆಯಬೇಕಂತೆ. ಇದನ್ನು ಮಾಡಿದ ಅಯೋಗ್ಯರ ಕಪಾಳಕ್ಕೆ ಹೊಡೆಯಬೇಕು. ಬ್ರಾಹ್ಮಣ ಸಮಾಜವನ್ನು ಒಡೆದು ಬ್ರಾಹ್ಮಣ ಕ್ರಿಶ್ಚಿಯನ್ ಎಂಬ ಹೊಸ ಧರ್ಮ ಮಾಡಲು ಹೊರಟಿದ್ದಾರೆ, ಇದನ್ನೆಲ್ಲ ಸಹಿಸಲು ಸಾಧ್ಯವೇ? ಪ್ರತಿಯೊಂದು ಸಮುದಾಯ, ಜಾತಿಗಳನ್ನು ಛಿದ್ರ ಛಿದ್ರ ಮಾಡಿ ಹಿಂದೂ ಸಮಾಜವನ್ನು ಒಡೆಯಲು ಹೊರಟಿದ್ದಾರೆ. ಇದು ಮೂರ್ಖತನದ ಪರಮಾವಧಿಯಲ್ಲದೇ ಬೇರೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಸಮುದಾಯಗಳನ್ನು ಒಡೆದು ಮುಸ್ಲಿಂರ ಸಂಖ್ಯೆ, ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿಗೆ ತೋರಿಸಿ ಅವರ ಕೈಗೆ ಆಡಳಿತ ಕೊಡಲು ಹೊರಟಿದ್ದಾರೆ. ಈ ಮೂಲಕ ಹೈಕಮಾಂಡ್ ನಾಯಕರನ್ನು ಖುಷಿಪಡಿಸಲು ರಾಜಕೀಯ ದುರುದ್ದೇಶಕ್ಕೆ ಜಾತಿಗಣತಿ ಮಾಡುತ್ತಿದ್ದಾರೆ. ಮೊದಲು ಜಾತಿಗಣತಿ ಹಿಂಪಡೆಯಲಿ ಎಂದರು.