ಮೈಸೂರು: ಬಾನು ಮುಷ್ತಾಕ್ ಕನ್ನಡಾಂಬೆ ಕುರುತ ಹೇಳಿಕೆಗೆ ಮೊದಲು ಸ್ಪಷ್ಟನೆ ಕೊಡಲಿ. ಇಲ್ಲವಾದಲ್ಲಿ ಅವರು ದಸರಾ ಉದ್ಘಾಟನೆ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್, ದಸರಾ ಉದ್ಘಾಟನೆಗೆ ಸರ್ಕಾರ ಅವರನ್ನು ಆಯ್ಕೆ ಮಾಡಿದಾಗ ಸ್ವಾಗತಿಸಿದ್ದೆ. ಆದರೆ ಅವರ ಹಳೆಯ ಭಾಷಣವನ್ನು ಈಚೆಗೆ ನೋಡಿದೆ. ಆ ಭಾಷಣಕ್ಕೆ ಸ್ಪಷ್ಟೀಕರಣ ಕೊಡಲಿ. ಇಲ್ಲವೇ ಹೇಳಿಕೆ ವಾಪಸ್ ಪಡೆಯಲಿ. ಎರಡೂ ಮಾಡದಿದ್ದರೆ ಅವರು ದಸರಾ ಉದ್ಘಾಟನೆಗೆ ನನ್ನ ವಿರೋಧವಿದೆ. ಪಕ್ಷದ ನಿರ್ಧಾರವೇ ನಮ್ಮ ನಿರ್ಧಾರ. ಪಕ್ಷದ ವಿರುದ್ಧವಾದ ನಿಲುವು ನನ್ನದಲ್ಲ ಎಂದರು.
ತಾಯಿ ಭುವನೇಶ್ವರಿ ಕುರಿತ ಬಾನು ಮುಷ್ತಾಕ್ ಅವರ ಹೇಳಿಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಅದನ್ನು ಅವರು ಅರ್ಥಮಾಡಿಕೊಳ್ಳಬೇಕು. ಅವರ ಧರ್ಮದ ಆಚರಣೆ ಬಗ್ಗೆ ನಾವು ಮಾತನಾಡಲ್ಲ. ನಮ್ಮ ಧರ್ಮದಲ್ಲಿ ಮೂರ್ತಿಪೂಜೆ ಶ್ರೇಷ್ಠ. ಚಾಮುಂಡಿಮಾತ್ರ್ಯನ್ನು ಗೌರವಿಸಿ ಬರಲಿ ಎಂದು ಹೇಳಿದರು.
ಇದೇ ವೇಳೆ ಚಾಮುಂಡಿ ಬೆಟ್ಟ ಪುರಾತನಕಾಲದಿಂದಲೂ ಹಿಂದೂಗಳ ದೇವಸ್ಥಾನ. ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ. ಇದು ಬೇರೆಯವರ ಶ್ರದ್ಧಾಕೇಂದ್ರವಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.