ಯಾದಗಿರಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಇನ್ನು ಕೆಲ ಜಿಲ್ಲೆಗಳಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳದಿಂದ ಜನರು ಹೈರಾಣಾಗುತ್ತಿದ್ದಾರೆ. ಅದರಲ್ಲಿಯೂ ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದಾಗಿ ನವಜಾತ ಶಿಶುಗಳು, ಮಕ್ಕಳು ಸಂಕಷ್ಟಕ್ಕೀಡಾಗಿದ್ದಾರೆ.
ಯಾದಗಿರಿಯಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಮೂತ್ರ ವಿಸರ್ಜನೆ ಸಮಸ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಬಾಣಂತಿಯರು, ಮಕ್ಕಳ ಪ್ರಮಾಣ ಹೆಚ್ಚುತ್ತಿದೆ.
ಯಾದಗಿರಿ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮನೆಯಿಂದ ಜನರು ಹೊರಬರಲಾಗದೇ ಪರದಾಡುತ್ತಿದ್ದಾರೆ. ಮುಂಜಾನೆಯಿಂದಲೇ ರಣ ಬಿಸಿಲ ಜಳಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಇನ್ನು ಮಕ್ಕಳು, ನವಜಾತ ಶಿಶುಗಳ ಪಾಡಂತೂ ನೋಡಲಾಗದು. ಬಿಸಿಲು ಹೆಚ್ಚುತ್ತಿರುವುದರಿಂದ ಮಕ್ಕಳಲ್ಲಿ, ಕಂದಮ್ಮಗಳಲ್ಲಿ ನಿರ್ಜಲೀಕರಣ ಸಮಸ್ಯೆ, ಕಿಡ್ನಿ ಬಾವು, ಮೂತ್ರ ವಿಸರ್ಜನೆ ಸಮಸ್ಯೆ, ಮೈಮೇಲೆ ಸೆಕೆ ಗುಳ್ಳೆ ಹೆಚ್ಚುತ್ತಿದೆ.
ಜಿಲ್ಲೆಯ ತಾಯಿ ಮಕ್ಕಳ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಬಾಣಂತಿಯರು, ನವಜಾತ ಶಿಶುಗಳು ದಾಖಲಾಗುತ್ತಿದ್ದಾರೆ. ಮಕ್ಕಳಿಗೆ ತೆಳ್ಳನೆಯ ಬಟ್ಟೆ ತೊಡಿಸಿ, ತಾಯಂದಿರು ಸರಿಯಾದ ಸಮಯಕ್ಕೆ ಮಕ್ಕಳಿಗೆ ಎದೆ ಹಾಲುಣಿಸಿ ಎಂದು ಮಕ್ಕಳ ತಜ್ಞರು ಸಲಹೆ ನೀಡಿದ್ದಾರೆ.
ತಾಪಮಾನ ಹೆಚ್ಚುತ್ತಿರುವುದರಿಂದ ಶಿಶುಗಳು ಬೇರೆ ಕಾಯಿಲೆಗೂ ತುತ್ತಾಗುವ ಸಾಧ್ಯತೆ ಇದೆ ಹಾಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.