ಬೆಂಗಳೂರು: ಅಲ್ ಖೈದಾ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಜಾರ್ಖಂಡ್ ಮಹಿಳೆಯನ್ನು ಬೆಂಗಳೂರಿನಲ್ಲಿ ಗುಜರಾತ್ ಎಟಿಎಸ್ ನಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಶಮಾ ಪರ್ವಿನ್ ಬಂಧಿತ ಮಹಿಳೆ. ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ನೆಲೆಸಿದ್ದ ಶಮಾ ಸಾಮಾಜಿಕ ಜಾಲತಾಣದಲ್ಲಿ ಅಲ್ ಖೈದಾ ಉಗ್ರ ಸಂಘಟನೆ ಸೇರಿ ಜಿಹಾದ್ ಬೋಧಿಸುವ ಮೂಲಭೂತವಾದಿ ಸಂಘಟನೆಗಳ ಜೊತೆಗೆ ನಂಟು ಹೊಂದಿದ ಆರೋಪದ ಮೇರೆಗೆ ಗುಜರಾತ್ ರಾಜ್ಯದ ಉಗ್ರ ನಿಗ್ರಹ ಪಡೆ ತಂಡ ಬಂಧಿಸಿದೆ.
ಆಕೆಯಿಂದ ಲ್ಯಾಪ್ಟಾಪ್ ಸೇರಿ ಕೆಲವು ದಾಖಲೆಗಳನ್ನು ಗುಜರಾತಿ ಎಟಿಎಸ್ ಜಪ್ತಿ ಮಾಡಿದೆ. ಇಸ್ಲಾಂ ಮೂಲಭೂತವಾದಿ ಸಂಘಟನೆಗಳ ಜತೆ ನಂಟು ಹೊಂದಿದ್ದ ಶಮಾ ಬಗ್ಗೆ ಸುಳಿವು ಆಧರಿಸಿ ಎಟಿಎಸ್ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ನಂತರ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವರ್ಗಾವಣೆ ಪತ್ರ ಪಡೆದು ಗುಜರಾತ್ ಗೆ ಕರೆದುಕೊಂಡು ಹೋಗಿದ್ದಾರೆ.
ಕೆಲವು ದಿನಗಳ ಹಿಂದೆ ಅಲ್ ಖೈದಾ ಗ್ಯಾಂಗ್ ವೊಂದನ್ನು ಗುಜರಾತ್ ಎಟಿಎಸ್ ಪತ್ತೆ ಹಚ್ಚಿದ್ದು, ಅವರ ಸಂಪರ್ಕ ಜಾಲಾಡಿದಾಗ ಶಮಾ ಪರ್ವಿನ್ ಬಗ್ಗೆ ಮಾಹಿತಿ ಸಿಕ್ಕಿದೆ. ಮಂಗಳವಾರ ಬೆಳಿಗ್ಗೆ ಆಕೆಯನ್ನು ಬಂಧಿಸಲಾಗಿದೆ. ಶಮಾ ವಿಚಾರ ತಿಳಿದು ಆಕೆಯ ತಾಯಿ ಮತ್ತು ಸೋದರನಿಗೆ ಆಘಾತವಾಗಿದೆ.