ಬೆಂಗಳೂರು: ಪತಿಯ ಕಿರುಕುಳ, ಹಿಂಸೆಗೆ ಬೇಸತ್ತ ಮಹಿಳೆಯೊಬ್ಬರು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಬೆನ್ನು ಮೂಳೆ ಹಾಗೂ ಎರಡೂ ಕಾಲುಗಳಿಗೆ ಗಾಯಗಳಾಗಿವೆ. ಅಂಬೇಡ್ಕರ್ ಆಸ್ಪತ್ರೆಗೆ ,ಮಹಿಳೆಯನ್ನು ದಾಖಲಿಸಲಾಗಿದೆ. ಆದರೆ ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾ ಹಾಗೂ ನಿಕ್ಸನ್ ಪ್ರೀತಿಸಿ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪ್ರತಿ ದಿನ ಪತಿ ನಿಕ್ಸನ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ದಂಪತಿಗೆ ಹೆಣ್ಣು ಮಗು ಕೂಡ ಇದ್ದಾಳೆ. ಆದಾಗ್ಯೂ ಕಂಠಪೂರ್ತಿ ಕುಡಿದು ಬಂದು ಪತ್ನಿಯನ್ನು ಬಾಯಿಗೆ ಬಂದಂತೆ ಬೈದು, ಎಲ್ಲಿಯಾದರೂ ಹೋಗು ಎಂದು ಹಲ್ಲೆ ನಡೆಸುತ್ತಿದ್ದನಂತೆ. ಪತಿಯ ಹಿಂಸೆಗೆ ನೊಂದು ಪ್ರಿಯಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
