ಬಳ್ಳಾರಿ: ಜನನ ಪ್ರಮಾಣ ಪತ್ರ ಮಾಡಿಸಿಕೊಡುವುದಾಗಿ ನಂಬಿಸಿ ಒಂದೂವರೆ ತಿಂಗಳ ಮಗುವನ್ನು ಕದ್ದೊಯ್ದ ಅಪರಿಚಿತ ಮಹಿಳೆಯ ಜಾಡು ಹಿಡಿದ ಪೊಲೀಸರು ಘಟನೆ ನಡೆದ ಆರು ಗಂಟೆಯಲ್ಲೇ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿ ತಾಲೂಕಿನ ಬೆಣಕಲ್ಲು ಗ್ರಾಮದ ಶ್ರೀದೇವಿ ಸುರೇಶ್ ಅವರು ತಮ್ಮ ಗಂಡು ಮಗುವಿನೊಂದಿಗೆ ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಬುರ್ಖಾಧಾರಿ ಮಹಿಳೆಯೊಬ್ಬರು ಪರಿಚಯಿಸಿಕೊಂಡು ಮಗುವಿನ ಜನನ ಪ್ರಮಾಣ ಪತ್ರ ಮಾಡಿಸಿ ಕೊಡುವುದಾಗಿ ನಂಬಿಸಿ ಶ್ರೀದೇವಿ ಅವರನ್ನು ಪಾಲಿಕೆಯ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ಶ್ರೀದೇವಿಯವರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಅಪರಿಚಿತ ಮಹಿಳೆ ಕೈಗೆ ಮಗು ಕೊಟ್ಟಿದ್ದಾರೆ. ಆದರೆ ಅವರು ವಾಪಸ್ ಬರುವಷ್ಟರಲ್ಲಿ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದಳು.
ಇದರಿಂದ ಆತಂಕಗೊಂಡ ಶ್ರೀದೇವಿ ಅವರು ಬ್ರೂಸ್ ಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ಆರು ಗಂಟೆಯೊಳಗೆ ಮಗುವನ್ನು ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.